ಒಕ್ಕಲಿಗ ಸೇವಾ ಸಂಘ ವಾರ್ಷಿಕ ಮಹಾಸಭೆ, ಸತ್ಯನಾರಾಯಣ ಪೂಜೆ

ಶೇರ್ ಮಾಡಿ

 

ಕೊಕ್ಕಡ: ಶಿಶಿಲ ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಗ್ರಾಮಸಮಿತಿ ಶಿಶಿಲ ಇದರ ಆಶ್ರಯದಲ್ಲಿ ವಾರ್ಷಿಕ ಮಹಾಸಭೆ ಹಾಗೂ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ಶಿಶಿಲ ಗ್ರಾಮದ ಪಡ್ಪು ಕೊರಗಪ್ಪ ಗೌಡ ಅವರ ಮನೆಯಲ್ಲಿ ನೆರವೇರಿತು.

ಕಾರ್ಯಕ್ರಮವನ್ನು ಮೋಹನ್ ಗೌಡ ನಡ ಉದ್ಘಾಟಿಸಿ ಮಾತನಾಡಿ ನಮ್ಮ ಸಮುದಾಯದ ಸಂಘಟನೆ ಇನ್ನಷ್ಟು ಬಲಿಷ್ಠಗೊಳ್ಳಬೇಕು. ಸಂಘದ ಚಟುವಟಿಕೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಶಾಲಪ್ಪ ಗೌಡ ಬದ್ರಿಜಾಲು ವಹಿಸಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಭುವನ್ ಕುಮಾರ್ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಶಿಶಿಲ ಗ್ರಾಮದಲ್ಲಿ ಒಟ್ಟು 8 ಗ್ರಾಮ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಸಮಿತಿಗಳೂ ಸಕ್ರಿಯವಾಗಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಕೋಶಾಧಿಕಾರಿ ರಂಜಿತ್ ಗೌಡ ಕಳೆಂಜ,ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಊರ ಗೌಡರಾದ ರಮೇಶ್ ಪಿಲಿಂಗಲ್, ಗ್ರಾಮ ಸಮಿತಿಯ ಮಹಿಳಾ ವೇದಿಕೆಯ ಅಧ್ಯಕ್ಷೆ ಉಮಾವತಿ ಗಣೇಶ್ ಉಪಸ್ಥಿತರಿದ್ದರು. ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು.

ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕುಮಾರಿ ಅನಿತಾ, ಪ್ರತಿಕ್, ಸ್ನೇಹ, ಅಂಕಿತಾ, ಸ್ವಸ್ತಿಕ್, ಅನುಪ್, ಧನ್ಯಶ್ರೀ ಹಾಗೂ ಲಾವಣ್ಯ ಮುಚ್ವಿರಡ್ಕ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ತೆಂಗಿನ ಗೆರಟೆಯಲ್ಲಿ ಕರಕುಶಲ ವಸ್ತುಗಳನ್ನು ವಿನೂತನವಾಗಿ ರೂಪಿಸುವ ಅಶೋಕ ಹೊಸಕಟ್ಟ, ಗದ್ದೆ ನಾಟಿ ಕಾರ್ಯದಲ್ಲಿ ತೊಡಗಿರುವ ಗಣೇಶ್ ಕೆಳಗಿನ ಒಟ್ಲ ಹಾಗೂ ಧರ್ಣಪ್ಪ ದೇವಸ, ನಾಟಿ ವೈದ್ಯರಾಗಿರುವ ಗಿರಿಜ ಜಿನ್ನಪ್ಪ ಗೌಡ ಇವರನ್ನೂ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಸ್ಥಳ ನೀಡಿದ ಕೊರಗಪ್ಪ ಗೌಡ ಪಡ್ಪು ಅವರನ್ನು ಸನ್ಮಾನಿಸಲಾಯಿತು. ಸ್ಪಂದನ ಸೇವಾ ಸಂಘದ ವತಿಯಿಂದ ಸಂಕಪ್ಪ ಗೌಡ ಅವರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು.

ಜಯಶ್ರೀ ಬಳಗದವರು ಪ್ರಾರ್ಥಿಸಿದರು. ಭವ್ಯಶ್ರೀ ಶಾಲೆಗುಡ್ಡೆ ಸ್ವಾಗತಿಸಿದರು. ಮೊನಿಕಾ ಗುತ್ತು ನಿರೂಪಿಸಿದರು. ಕರುಣಾಕರ್ ಶಿಶಿಲ ವಂದಿಸಿದರು.

 

Leave a Reply

error: Content is protected !!