ಆಮಂತ್ರಣ ವೇದಿಕೆಯ ಕಡಬ ತಾಲೂಕು ಪದಗ್ರಹಣ ಸಮಾರಂಭ

ಶೇರ್ ಮಾಡಿ

 

ಆಮಂತ್ರಣ ವೇದಿಕೆಯ ಕಡಬ ತಾಲೂಕು ಪದಗ್ರಹಣ ಸಮಾರಂಭ

ನೆಲ್ಯಾಡಿ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕದ ಕಡಬ ತಾಲೂಕು ಘಟಕದ ಪದಗ್ರಹಣ ಸಮಾರಂಭವು ಭಾನುವಾರ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಏಸುಕ್ರಿಸ್ತನ ಪುನರ್ಜನ್ಮದ ಶುಭದಿನದಂದು ಈ ವೇದಿಕೆಯ ಉದ್ಘಾಟನೆ ನಡೆಯುತ್ತಿರುವುದು ವಿಶೇಷ ಸಂತಸದ ಸಂಗತಿಯಾಗಿದೆ ಎಂದರು. ತಾಲೂಕು ಮಟ್ಟದಲ್ಲಿ ಇಂತಹ ಸಾಂಸ್ಕೃತಿಕ ಸಾಹಿತ್ಯ ವೇದಿಕೆಗಳ ಆರಂಭವು ಹೆಮ್ಮೆಯ ವಿಷಯವಾಗಿದ್ದು, ಯುವಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ಯುವ ಪ್ರತಿಭೆಗಳು ಮುಂದೆ ಬರಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಆಮಂತ್ರಣ ವೇದಿಕೆಯ ಗೌರವ ಸಲಹೆಗಾರ ಬಿ. ಭುಜಬಲಿ ಧರ್ಮಸ್ಥಳ ಮಾತನಾಡಿ, ಈಗಾಗಲೇ ರಾಜ್ಯದ 11 ತಾಲೂಕುಗಳಲ್ಲಿ ಘಟಕಗಳು ಸ್ಥಾಪನೆಗೊಂಡಿದ್ದು, ಉಳಿದ ಕಡೆಗಳಲ್ಲಿಯೂ ಶೀಘ್ರದಲ್ಲೇ ಆರಂಭಗೊಳ್ಳಲಿವೆ ಎಂದರು. ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವುದರೊಂದಿಗೆ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದೇ ಈ ಸಂಘಟನೆಯ ಮುಖ್ಯ ಉದ್ದೇಶ ಎಂದು ಹೇಳಿದರು.

ಆಮಂತ್ರಣ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ವಿಂಧ್ಯಾ.ಎಸ್.ರೈ ಕಡೇಶಿವಾಲಯ ಅವರು ನೂತನವಾಗಿ ಆಯ್ಕೆಯಾದ ಕಡಬ ತಾಲೂಕು ಪದಾಧಿಕಾರಿಗಳಿಗೆ ಪದಪ್ರಧಾನ ನೆರವೇರಿಸಿದರು.

ಆಮಂತ್ರಣ ಪರಿವಾರ ವೇದಿಕೆಯ ಸ್ಥಾಪಕ ವಿಜಯಕುಮಾರ್ ಜೈನ್ ಆಳದಂಗಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆಯ ಸ್ಥಾಪನೆ, ಉದ್ದೇಶಗಳು ಹಾಗೂ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ವೇದಿಕೆಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಅನಿತಾ ಶೆಟ್ಟಿ, ನೆಲ್ಯಾಡಿ–ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್ ದುರ್ಗಾಶ್ರೀ, ಕಡಬ ತಾಲೂಕು ಘಟಕದ ನಿಯೋಜಿತ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕೆ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಕವಿಗಳಿಂದ ಕವನ ವಾಚನ, ಆಯ್ದ ಕವನಗಳ ಗಾಯನ, ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ವಿದ್ಯಾರ್ಥಿಗಳಿಂದ ಕೀಬೋರ್ಡ್, ರಿದಂ ಪ್ಯಾಡ್, ಸ್ಯಾಕ್ಸೋಫೋನ್ ವಾದನ ಹಾಗೂ ಗಾಯನ ಕಾರ್ಯಕ್ರಮಗಳು ಮನಸೆಳೆದವು.

ಈ ಸಂದರ್ಭದಲ್ಲಿ ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ವೆಂಕಟರಮಣ ಆರ್, ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ಎಲುಬು ಮತ್ತು ಕೀಲು ತಜ್ಞ ಡಾ. ಶಮಂತ್ ವೈ.ಕೆ, ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದ ದಿನೇಶ್ ರೈ ಕಡಬ, ಆಮಂತ್ರಣ ಪರಿವಾರದ ಸ್ಥಾಪಕ ವಿಜಯಕುಮಾರ್ ಜೈನ್ ಆಳದಂಗಡಿ, ಜಿಲ್ಲಾಧ್ಯಕ್ಷೆ ವಿಂಧ್ಯಾ ಎಸ್ ರೈ, ಉಪಾಧ್ಯಕ್ಷೆ ಅನಿತಾ ಶೆಟ್ಟಿ ಹಾಗೂ ಕೌಕ್ರಾಡಿ – ನೆಲ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ರಮೇಶ್ ಬಾಣಜಾಲು ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಸದಸ್ಯರು ಮತ್ತು ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.

ವಿಶ್ವನಾಥ ಶೆಟ್ಟಿ ಕೆ ಸ್ವಾಗತಿಸಿದರು. ನ್ಯಾನ್ಸಿ ನೆಲ್ಯಾಡಿ, ನವ್ಯ ಪ್ರಸಾದ್ ಹಾಗೂ ಹಂಸರಾಗ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣಿ ಸುಧಾಕರ ಶೆಟ್ಟಿ ವಂದಿಸಿದರು.

 

Leave a Reply

error: Content is protected !!