





ನೆಲ್ಯಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2025–26ನೇ ಆರ್ಥಿಕ ವರ್ಷದಲ್ಲಿ ಶೇಕಡ 100 ಸಾಲ ವಸೂಲಾತಿ ಸಾಧನೆ ಮಾಡಿ ಮತ್ತೊಮ್ಮೆ ಗಮನ ಸೆಳೆದಿದೆ. ಸಂಘದ ಸದಸ್ಯರು ಪಡೆದ ಸಾಲದ ಕಂತುಗಳನ್ನು ನಿಗದಿತ ಅವಧಿಯೊಳಗೆ ಸಕಾಲದಲ್ಲಿ ಮರುಪಾವತಿಸಿರುವುದರಿಂದ ಈ ಅಪೂರ್ವ ಸಾಧನೆ ಸಾಧ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಯಾಕರ ರೈ ಕೆ.ಎಂ ತಿಳಿಸಿದ್ದಾರೆ.
ಸಂಘವು ಇದಕ್ಕೂ ಮೊದಲು 2023–24 ಹಾಗೂ 2024–25ನೇ ಸಾಲಿನಲ್ಲಿಯೂ ಶೇಕಡ 100 ಸಾಲ ವಸೂಲಾತಿ ಸಾಧನೆ ಮಾಡಿದ್ದು, ಇದೀಗ 2025–26ರಲ್ಲೂ ಅದೇ ಸಾಧನೆಯನ್ನು ಪುನರಾವರ್ತಿಸಿ ಹ್ಯಾಟ್ರಿಕ್ ದಾಖಲಿಸಿದೆ. 67ನೇ ವರ್ಷದತ್ತ ಮುನ್ನಡೆಯುತ್ತಿರುವ ಈ ಸಂಘವು 7 ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಕೃಷಿ ಸಾಲ, ಬೆಳೆ ವಿಮೆ ಯೋಜನೆಗಳ ಸೌಲಭ್ಯ ಒದಗಿಸುತ್ತಿದೆ. ಜೊತೆಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್, ಶ್ರೀ ಶಕ್ತಿ ಸ್ವಸಹಾಯ ಸಂಘಗಳು ಹಾಗೂ ಇತರ ಸಂಘ-ಸಂಸ್ಥೆಗಳಿಗೆ ಸಹ ಸಾಲ ವಿತರಣೆ ಮಾಡುತ್ತಿದೆ. ರಸಗೊಬ್ಬರ ಮಾರಾಟ ಹಾಗೂ ಪಡಿತರ ವಿತರಣೆಯಲ್ಲಿಯೂ ಸಂಘ ಸಕ್ರಿಯವಾಗಿದೆ. ಸಂಘವು ಲಾಭದಾಯಕವಾಗಿ ಮುನ್ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನಿರಂತರ ಆರು ವರ್ಷಗಳಿಂದ “ಉತ್ತಮ ಸಹಕಾರಿ ಸಂಘ” ಪ್ರಶಸ್ತಿಯನ್ನು ಪಡೆದಿದೆ. 2020ರಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಹದಲ್ಲಿ ಸಹಕಾರಿ ಇಲಾಖೆಯಿಂದ “ಉತ್ತಮ ಕೃಷಿ ಪತ್ತಿನ ಸಹಕಾರಿ ಸಂಘ” ಪ್ರಶಸ್ತಿಯನ್ನೂ ಪಡೆದುಕೊಂಡಿದೆ.
ಅಧ್ಯಕ್ಷರ ಮಾತು:
ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಅವರು, “ನಿರಂತರ ಮೂರು ವರ್ಷಗಳಿಂದ ಶೇಕಡ 100 ಸಾಲ ವಸೂಲಾತಿ ಸಾಧನೆ ಮಾಡಿರುವುದು ಸಂಘದ ಸದಸ್ಯರ ವಿಶ್ವಾಸ ಮತ್ತು ಸಹಕಾರದ ಪ್ರತಿಫಲ. ಸಕಾಲದಲ್ಲಿ ಸಾಲ ಮರುಪಾವತಿಸಿದ ಸದಸ್ಯರು, ಸಂಘದ ಅಭಿವೃದ್ಧಿಗೆ ಕೈಜೋಡಿಸಿದ ಗ್ರಾಹಕರು, ಪ್ರಾಮಾಣಿಕ ಸೇವೆ ಸಲ್ಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗಕ್ಕೆ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ವಲಯ ಮೇಲ್ವಿಚಾರಕರಿಗೆ ಆಡಳಿತ ಮಂಡಳಿಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದರು.




