ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ಯಕ್ಷಗಾನದಲ್ಲಿ ಡಿಪ್ಲೊಮಾ ಪದವಿ ಪ್ರದಾನ

ಶೇರ್ ಮಾಡಿ

 

ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ಯಕ್ಷಗಾನದಲ್ಲಿ ಡಿಪ್ಲೊಮಾ ಪದವಿ ಪ್ರದಾನ

ಬೆಳ್ತಂಗಡಿ: ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಸಾಧಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆ ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ಯಕ್ಷಗಾನದಲ್ಲಿ ಡಿಪ್ಲೊಮಾ ಪದವಿ ಪ್ರದಾನಗೊಂಡಿದ್ದು, ಈ ಮೂಲಕ ಅವರು ಜಿಲ್ಲೆಯ ಮೊದಲ ಡಿಪ್ಲೊಮಾ ಪದವೀಧರರಾಗಿದ್ದಾರೆ.

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇದರ ಸಂಯೋಜನೆಯಲ್ಲಿ ಬೆಂಗಳೂರಿನ ಕಲಾ ಕದಂಬ ಆರ್ಟ್ ಸೆಂಟರ್ ಮೂಲಕ 2024-25ನೇ ಸಾಲಿನ ಯಕ್ಷಗಾನ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ಕೋರ್ಸ್‌ನ ಎರಡು ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭವು ಬೆಂಗಳೂರಿನ ಬಿ.ಎಂ. ಶ್ರೀ ಕಲಾಭವನದಲ್ಲಿ ಜರುಗಿತು.

ಸಮಾರಂಭವು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊ.ನಾಗೇಶ ವಿ. ಬೆಟ್ಟಕೋಟೆ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಪ್ರಸ್ತುತ ಕುಲಪತಿಗಳಾದ ಡಾ. ಕೆ. ರಾಮಕೃಷ್ಣಯ್ಯ ಅವರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ದಿವಾಕರ ಆಚಾರ್ಯ ಗೇರುಕಟ್ಟೆ ಅವರಿಗೆ ಪದವಿ ಪ್ರದಾನ ಮಾಡಿ ಗೌರವಿಸಿದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿರುವ ದಿವಾಕರ ಆಚಾರ್ಯರು ಹವ್ಯಾಸಿ ಕಲಾವಿದರಾಗಿ ಹಾಗೂ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ (ರಿ.), ಉಪ್ಪಿನಂಗಡಿ ಇದರ ಅಧ್ಯಕ್ಷರಾಗಿಯೂ, ಯಕ್ಷ ಭಾರತಿ (ರಿ.), ಬೆಳ್ತಂಗಡಿ ಇದರ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪದವಿ ಪ್ರದಾನ ಸಮಾರಂಭದಲ್ಲಿ ಬಿ.ಎಂ.ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಆರ್. ಲಕ್ಷ್ಮೀನಾರಾಯಣ, ಯಕ್ಷಗಾನ ವಿದ್ವಾಂಸರಾದ ಆನಂದ ರಾಮ ಉಪಾಧ್ಯ, ಫಣಿಗಿರಿ ಪ್ರತಿಷ್ಠಾನದ ಉಮೇಶ್ ಶಿರೂರು, ಕಲಾಕದಂಬ ಆರ್ಟ್ ಸೆಂಟರ್ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ ಹಾಗೂ ಕಾರ್ಯದರ್ಶಿ ಮುರಳೀಧರ ನಾವಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

Leave a Reply

error: Content is protected !!