





ಕೊಕ್ಕಡ: ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲು ಮನೆಯಂಗಳದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ನಡೆಯುತ್ತಿರುವ ಕರುಂಬಿತ್ತಿಲು ಸಂಗೀತ ಶಿಬಿರಕ್ಕೆ ಏ.15ರಂದು ಭವ್ಯವಾಗಿ ಚಾಲನೆ ದೊರಕಿತು. ಖ್ಯಾತ ಸಂಗೀತಗಾರ ಎಸ್.ಆರ್. ಮಾರುತಿ ಪ್ರಸಾದ್ ಅವರು ದೀಪ ಪ್ರಜ್ವಲಿಸಿ ಶಿಬಿರವನ್ನು ಉದ್ಘಾಟಿಸಿ, ಐದು ದಿನಗಳ ಸಂಗೀತೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಿಬಿರದ ಸಂಯೋಜಕರಾದ ವಿಠ್ಠಲ ರಾಮಮೂರ್ತಿ, ರಾಜರಾಜೇಶ್ವರಿ ಭಟ್, ಬೆಂಗಳೂರಿನ ಕೃಷ್ಣ ಸಿಂಗ್, ಧರ್ಮಸ್ಥಳದ ಕೆ. ಸೀತಾರಾಮ ತೋಳ್ಪಡಿತ್ತಾಯ, ಸಂಗೀತಗಾರ ಪ್ರಾದೇಶ ಆಚಾರ್ ಹಾಗೂ ಮಂಗಳೂರಿನ ಮಾಣಿಕೃಷ್ಣಸ್ವಾಮಿ ಅಕಾಡೆಮಿಯ ಪಿ.ನಿತ್ಯಾನಂದ ರಾವ್ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ ವಿಠ್ಠಲ ರಾಮಮೂರ್ತಿ ಸ್ವಾಗತಿಸಿ, ವಂದಿಸಿದರು.
ಶಿಬಿರದ ಮೊದಲ ದಿನದ ಕಾರ್ಯಕ್ರಮವಾಗಿ ಎಸ್.ಆರ್. ಮಾರುತಿ ಪ್ರಸಾದ್ ಅವರು ಮನಮೋಹಕ ಸಂಗೀತ ಕಚೇರಿ ನಡೆಸಿ ಶ್ರೋತೃಗಳನ್ನು ರಂಜಿಸಿದರು.
ಇದಕ್ಕೂ ಹಿಂದಿನ ವರ್ಷಗಳಲ್ಲಿ ಈ ಸಂಗೀತ ಶಿಬಿರದಲ್ಲಿ ವಿಶ್ವಪ್ರಸಿದ್ಧ ಕಲಾವಿದರಾದ ಲಾಲ್ಗುಡಿ ಜಿ. ಜಯರಾಮನ್, ವಿದ್ವಾನ್ ಬಾಲಮುರಳಿಕೃಷ್ಣ, ಉಮಯಾಳಪುರಂ ಶಿವರಾಮನ್, ಟಿ.ವಿ. ಗೋಪಾಲಕೃಷ್ಣ, ಎಂ. ಚಂದ್ರಶೇಖರ್, ವಿ.ವಿ. ಸುಬ್ರಹ್ಮಣ್ಯಂ, ಟಿ.ಎಂ. ಕೃಷ್ಣ, ವಿದುಷಿ ಬಾಂಬೆ ಜಯಶ್ರೀ, ನೈವೇಲಿ ಸಂತಾನಗೋಪಾಲನ್, ವಿದುಷಿ ಸೌಮ್ಯ, ವಿಜಯಶಿವ ಮುಂತಾದವರು ಸಂಗೀತ ಕಾರ್ಯಕ್ರಮ ನೀಡಿ ಸಂಗೀತಾಭ್ಯಾಸಿಗಳಿಗೆ ತಮ್ಮ ಕಲಾ ಶ್ರೀಮಂತಿಕೆಯನ್ನು ಧಾರೆಯೆರೆದಿದ್ದಾರೆ.
ಈ ವರ್ಷದ ಶಿಬಿರದಲ್ಲಿ ಪದ್ಮಶ್ರೀ ಎ.ಕನ್ಯಾಕುಮಾರಿ, ವಿದ್ವಾನ್ ಅಭಿಷೇಕ್ ರಘುರಾಮ್, ಡಾ.ಸುರೇಶ್ ವೈದ್ಯನಾಥನ್, ಅರ್ಜುನ್ ಕುಮಾರ್, ಬಿ.ಎಸ್. ಪುರುಷೋತ್ತಮ್, ಎಸ್.ಆರ್. ಮಾರುತಿ ಪ್ರಸಾದ್, ಬಾಲು ಮಾಸ್ತಿ ಸೇರಿದಂತೆ ಹಲವಾರು ಖ್ಯಾತ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಈ ಬಾರಿ ಶಿಬಿರವು ಸಂಗೀತಾಸಕ್ತರಿಗೆ ವಿಶೇಷ ಅನುಭವಗಳನ್ನು ನೀಡಲಿದ್ದು, ವಿವಿಧ ವಿಶೇಷ ಕಚೇರಿಗಳು, ಶ್ರೇಷ್ಠ ಕಲಾವಿದರ ಸಂದರ್ಶನಗಳು, ಪ್ರತಿ ಶಿಬಿರಾರ್ಥಿಗೂ ಮೃದಂಗ ಹಾಗೂ ವಯಲಿನ್ ಜೊತೆಗೆ ಪ್ರದರ್ಶನ ನೀಡುವ ಅವಕಾಶ, ಸಂಗೀತ ಕ್ವಿಜ್, ಸಂಗೀತ ಪ್ರಾತ್ಯಕ್ಷಿಕೆ, ಯಕ್ಷಗಾನ ಸೇರಿದಂತೆ ನಾನಾ ಚಟುವಟಿಕೆಗಳು ಆಯೋಜಿಸಲಾಗಿದೆ. ಶಿಬಿರದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಡಾ.ಎಂ.ಮೋಹನ್ ಆಳ್ವ ಹಾಗೂ ಡಾ.ಜಿ.ರಾಮಕೃಷ್ಣ ಆಚಾರ್ ಅವರು ಭಾಗವಹಿಸಲಿದ್ದಾರೆ.
ಏ.16ರಂದು ಡಾ. ಸುರೇಶ್ ವೈದ್ಯನಾಥನ್ ಹಾಗೂ ತಂಡದಿಂದ ‘ಮೃತ್ತಿಕಾ ವೈಭವಮ್’ ಎಂಬ ವಿಶಿಷ್ಟ ಕಾರ್ಯಕ್ರಮ, ಏ.17ರಂದು ಬಾಲು ಮಾಸ್ತಿ ಅವರ ವೀಣಾ ಕಛೇರಿ ಜೊತೆಗೆ ವಿದುಷಿ ಶ್ರೇಯಾ ಕೊಳತ್ತಾಯ ಮತ್ತು ವಿದ್ವಾನ್ ನಿರಂಜನ್ ದಿಂದೋಡಿ ಅವರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಏ.18ರಂದು ಬೆಳಗ್ಗೆ ಬಿ.ಎಸ್. ಪುರುಷೋತ್ತಮ್ ಅವರ ಲಯ ಕಾರ್ಯಾಗಾರ ಹಾಗೂ ಸಂಜೆ ವಿದುಷಿ ಸಂಗೀತ ಕಲಾನಿಧಿ ಎ. ಕನ್ಯಾಕುಮಾರಿ ಮತ್ತು ವಿಠಲ್ ರಂಗನ್ ಅವರ ದ್ವಂದ್ವ ವಯಲಿನ್ ವಾದನ, ಏ.19ರಂದು ಅಭಿಷೇಕ್ ರಘುರಾಮ್ ನೇತೃತ್ವದಲ್ಲಿ ಶಿಬಿರಾರ್ಥಿಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.




