






ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪಟ್ಟೆದಮೂಲೆ ಶ್ರೀದೇವಿ ನಿಲಯದಲ್ಲಿ ನಡೆದ ದೈವಗಳ ನೇಮೋತ್ಸವ ಹಾಗೂ ಹರಕೆಯ ಒತ್ತೆಕೋಲ ಕಾರ್ಯಕ್ರಮ ಧಾರ್ಮಿಕ ಭಕ್ತಿ, ಸಂಪ್ರದಾಯ ಮತ್ತು ಸಂಸ್ಕೃತಿಯ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಮಹೋತ್ಸವದ ಅಂಗವಾಗಿ ಕಲ್ಲಪಣೆ ತರವಾಡು ಮನೆಯಿಂದ ಏ21ರಂದು ಸಂಜೆ ವೈಭವಯುತ ಮೆರವಣಿಗೆಯೊಂದಿಗೆ ದೈವಗಳ ಭಂಡಾರವನ್ನು ತರಲಾಯಿತು.
ಬೆಳ್ಳಾರೆ ಕಲ್ಲಪಣೆ ಶ್ರೀ ಮಹಾವಿಷ್ಣುಮೂರ್ತಿ ಧರ್ಮದೈವ ವರ್ಣಾರ ಪಂಜುರ್ಲಿ ಹಾಗೂ ಸಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜಾ ವಿಧಿಗಳು ನೆರವೇರಿದ ಬಳಿಕ, ಪಟ್ಟೆದಮೂಲೆ ಶ್ರೀದೇವಿ ನಿಲಯದಲ್ಲಿ ನಡೆಯಲಿರುವ ಒತ್ತೆಕೋಲ ಹಾಗೂ ನೇಮೋತ್ಸವದ ನಿಮಿತ್ತ ಭಂಡಾರ ತರಲಾಯಿತು.

ನೆಲ್ಯಾಡಿ ಪೇಟೆಯಲ್ಲಿರುವ ಎಸ್‌ಟಿಜಿ ಕಾಲೇಜು ಬಳಿಯಿಂದ ದೈವಗಳ ಭಂಡಾರವನ್ನು ಬ್ಯಾಂಡ್, ಚೆಂಡೆ, ವಾದ್ಯಗಳೊಂದಿಗೆ ಕಾಲ್ನಡಿಗೆ ಮೆರವಣಿಗೆಯಲ್ಲಿ ನೆಲ್ಯಾಡಿ ಪೇಟೆ ಮೂಲಕ ಸಾಗಿ ಪಟ್ಟೆದಮೂಲೆಯ ಶ್ರೀದೇವಿ ನಿಲಯಕ್ಕೆ ತರಲಾಯಿತು. ಈ ವೇಳೆ ನೆಲ್ಯಾಡಿ ಸೂರ್ಯನಗರ ವರಮಹಾಲಕ್ಷ್ಮೀ ಭಜನಾ ಮಂಡಳಿ, ನೆಲ್ಯಾಡಿ-ಕೌಕ್ರಾಡಿ ಧರ್ಮಶ್ರೀ ಮಹಿಳಾ ಮತ್ತು ಮಕ್ಕಳ ಭಜನಾ ತಂಡ ಹಾಗೂ ಇಚ್ಲಂಪಾಡಿ ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ಸದಸ್ಯರಿಂದ ಕುಣಿತ ಭಜನೆ ನಡೆಯಿತು. ಏ.21ರ ರಾತ್ರಿ ಆರಂಭಗೊಂಡ ಕಾರ್ಯಕ್ರಮಗಳು ಏ.22ರ ಮಧ್ಯಾಹ್ನದವರೆಗೆ ನಿರಂತರವಾಗಿ ನಡೆಯಿತು. ಕಲ್ಲುರ್ಟಿ, ಧರ್ಮದೈವ ವರ್ಣಾರ ಪಂಜುರ್ಲಿ, ಚಾಮುಂಡಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ಹಾಗೂ ಒತ್ತೆಕೋಲ ನಡೆಯಿತು.

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರವಿಚಂದ್ರ ಹೊಸವಕ್ಲು, ಕೌಕ್ರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉದಯಕುಮಾರ್ ದೋಂತಿಲ, ಲೋಕೇಶ್ ಬಾಣಜಾಲು, ನೆಲ್ಯಾಡಿ ಗ್ರಾ.ಪಂ. ಮಾಜಿ ಸದಸ್ಯ ರವಿಪ್ರಸಾದ್ ಶೆಟ್ಟಿ ರಾಮನಗರ, ಗಣೇಶ್ ಕಾಂಪ್ಲೆಕ್ಸ್‌ನ ಮಾಲಕ ರಾಮಣ್ಣ ಗೌಡ, ಡಾ.ಸದಾನಂದ ಕುಂದರ್, ಬೆಂಗಳೂರಿನ ಉದ್ಯಮಿ ಉದಯಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸರ್ವೋತ್ತಮ ಗೌಡ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷೆ ಉಷಾ ಅಂಚನ್, ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕೆ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್ ದುರ್ಗಾ ಶ್ರೀ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪಟ್ಟೆದಮೂಲೆ ಶ್ರೀದೇವಿ ನಿಲಯದ ಕಾವೇರಿ ಅಮ್ಮ, ಶಿವಣ್ಣ ಪಿ.ಹೆಗ್ಡೆ, ಶ್ಯಾಮಲಾ ಹೆಗ್ಡೆ, ಶೈಲೇಶ್ ಹೆಗ್ಡೆ ಮತ್ತು ಕಲ್ಲಪಣೆ ಕುಟುಂಬದ ಮುಖ್ಯಸ್ಥ ಮೋನಪ್ಪ ಹೆಗ್ಡೆ ಸವಣೂರು ಸೇರಿದಂತೆ ಕುಟುಂಬಸ್ಥರು ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಿರ್ವಹಿಸಿದರು. ಗಂಗಾಧರ ಶೆಟ್ಟಿ ಹೊಸಮನೆ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ. ಕಾರ್ಯಕ್ರಮ ನಿರೂಪಕರಾಗಿ ಸಹಕರಿಸಿದರು.




