





ನೆಲ್ಯಾಡಿ: ಜೆಸಿಐ ನೆಲ್ಯಾಡಿ ವತಿಯಿಂದ ಆಯೋಜಿಸಲಾದ 14 ದಿನಗಳ ಯೋಗ ಶಿಬಿರಕ್ಕೆ ಸೋಮವಾರ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.
ಶಿಬಿರವನ್ನು ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಉಲಹನ್ನನ್.ಪಿ.ಎಂ. ಅವರು ಉದ್ಘಾಟಿಸಿ ಮಾತನಾಡಿ, ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದು ಅತ್ಯಗತ್ಯವಾಗಿದೆ. ಯೋಗವು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡುವ ಮಹತ್ವದ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಇಂತಹ ಶಿಬಿರಗಳು ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೋಗ ಶಿಕ್ಷಕ ಹಾಗೂ ಹೋಮಿಯೋಪತಿ ವೈದ್ಯ ಡಾ.ಅನೀಶ್ ಕುಮಾರ್ ಸಾದಂಗಾಯ ಅವರು ಶಿಬಿರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೆಲ್ಯಾಡಿ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ವಹಿಸಿ ಸ್ವಾಗತಿಸಿದರು. ಮಹಿಳಾ ಜೆಸಿಐ ಅಧ್ಯಕ್ಷೆ ನವ್ಯ ಪ್ರಸಾದ್, ಜೆಸಿಐ ನಿಕಟ ಪೂರ್ವಾಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಯೋಜನಾ ನಿರ್ದೇಶಕ ದೇವಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೆಸಿಐ ಸದಸ್ಯೆ ದೀಪಿಕಾ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಜೆಸಿಐ ಸದಸ್ಯೆ ನಮಿತಾ ಅಮ್ಮುಂಜೆ ಜೇಸಿವಾಣಿ ವಾಚಿಸಿದರು. ಕಾರ್ಯದರ್ಶಿ ಸುಪ್ರಿತಾ ರವಿಚಂದ್ರ ವಂದಿಸಿದರು.
ಈ ಯೋಗ ಶಿಬಿರವು ಮುಂದಿನ 14 ದಿನಗಳ ಕಾಲ ನಡೆಯಲಿದ್ದು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯಕರ ಜೀವನದತ್ತ ಹೆಜ್ಜೆ ಇಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.



