





ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಶಿಶಿಲ ಶ್ರೀ ಶಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮೇ.14ರಿಂದ 22ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಮಹೋತ್ಸವದ ಅಂಗವಾಗಿ ಮೇ.2ರಂದು ಗೊನೆ ಕಡಿಯುವ ಮೂಲಕ ಜಾತ್ರೆಗೆ ವಿಧಿವತ್ತಾಗಿ ಚಾಲನೆ ನೀಡಲಾಯಿತು.
ತಾಲೂಕಿನ ಕೊನೆಯ ಜಾತ್ರೋತ್ಸವವೆಂದು ಖ್ಯಾತಿ ಪಡೆದಿರುವ ಶಿಶಿಲೇಶ್ವರ ದೇವರ ಜಾತ್ರೆ ಪ್ರತಿ ವರ್ಷವೂ ಭಕ್ತರ ಅಪಾರ ಭಕ್ತಿಭಾವದ ನಡುವೆ ನಡೆಯುತ್ತದೆ. ಈ ಬಾರಿ ಮೇಷ ಮಾಸದ ಹದಿನೆಂಟನೇ ಸಲುವ ದಿನದಂದು ನಡೆದ ಗೊನೆ ಮುಹೂರ್ತ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ಗೋಖಲೆ ಅವರ ಅಧ್ಯಕ್ಷತೆಯಲ್ಲಿ, ಸದಸ್ಯರಾದ ಶ್ರೀಧರ ರಾವ್, ನಾರಾಯಣ ಸುವರ್ಣ, ರಮೇಶ್ ಗೌಡ ಹಾಗೂ ಸುಂದರ ಗೌಡ ಉಪಸ್ಥಿತರಿದ್ದರು.
ಕ್ಷೇತ್ರದ ಅರ್ಚಕ ರಾಮ ಕಾರಂತರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೊನೆ ಮುಹೂರ್ತ ನೆರವೇರಿಸಿ, ಜಾತ್ರಾ ಮಹೋತ್ಸವಕ್ಕೆ ಶುಭಾರಂಭ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ದೈವ ಪರಿಚಾರಕ ಬಾಲಕೃಷ್ಣ ಗೌಡ ಗಾಣದಕೊಟ್ಟಿಗೆ, ಸುರೇಶ್ ಗೌಡ ಅಂಬೆಲ್ತಡ್ಕ, ಗ್ರಾಮಸ್ಥರಾದ ಯೋಗೀಶ್ ದಾಮ್ಲೆ, ವಿಶ್ವನಾಥ ಪೂಜಾರಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
ಮೇ14ರಿಂದ ಆರಂಭವಾಗಲಿರುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.



