






ಕೊಕ್ಕಡ: ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ದೇವಸ ಎಂಬಲ್ಲಿಗೆ ಸಂಬಂಧಿಕರ ಮನೆಗೆ ಆಗಮಿಸಿದ್ದ ನೆಲ್ಯಾಡಿ ಪಾಲೇತ್ತಾಡಿ ನಿವಾಸಿ ಅಶ್ವಿತ್ ಕುಮಾರ್(37) ಅವರು ಮೇ.17ರಂದು ಸಂಜೆ 4.15ರ ಬಳಿಕ ಕಾಣೆಯಾಗಿದ್ದು, ಎರಡು ದಿನಗಳ ತೀವ್ರ ಹುಡುಕಾಟದ ಬಳಿಕ ಮಂಗಳವಾರ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಶ್ವಿತ್ ಕುಮಾರ್ ಅವರು ಕಾಣೆಯಾಗಿರುವ ಬಗ್ಗೆ ಆತಂಕಗೊಂಡ ಕುಟುಂಬದವರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ಶೌರ್ಯ” ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಸಹಕಾರ ಕೋರಿದರು. ಮಾಹಿತಿ ದೊರಕುತ್ತಿದ್ದಂತೆ ಶಿಶಿಲ–ಅರಶಿನಮಕ್ಕಿ ಘಟಕದ ಸ್ವಯಂಸೇವಕರು ತಕ್ಷಣವೇ ಕಾರ್ಯಾಚರಣೆಗೆ ಇಳಿದಿದ್ದರು.
ಕಾಣೆಯಾದ ಮರುದಿನದಿಂದಲೇ ಶೌರ್ಯ ತಂಡದ ಸ್ವಯಂಸೇವಕರು ಹಾಗೂ ಸ್ಥಳೀಯರು ಅರಣ್ಯ ಪ್ರದೇಶ, ನದಿ, ಗುಡ್ಡಗಾಡು, ಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದರು. ಬೆಳಿಗ್ಗೆಯಿಂದ ಸಂಜೆವರೆಗೆ ಕಾರ್ಯಾಚರಣೆ ನಡೆದರೂ ಅಶ್ವಿತ್ ಕುಮಾರ್ ಅವರ ಪತ್ತೆಯಾಗಿರಲಿಲ್ಲ.
ಕಾಣೆಯಾಗಿ ಮೂರನೇ ದಿನವಾದ ಮೇ 19 ಕೂಡ “ಶೌರ್ಯ” ತಂಡದ ಸದಸ್ಯರು, ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಸದಸ್ಯರು ಹಾಗೂ ಸ್ಥಳೀಯರು ಬೆಳಿಗ್ಗೆಯಿಂದಲೇ ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದರು. ಈ ವೇಳೆ ಶಿರಾಡಿ ಗ್ರಾಮದ ಕುಕ್ಕುಂಜ ಸಮೀಪದ ಉದನೆ ಹೊಳೆಯ ಬಳಿ ಮಧ್ಯಾಹ್ನ ಸುಮಾರು 2.15ರ ವೇಳೆಗೆ ನಿತ್ರಾಣ ಸ್ಥಿತಿಯಲ್ಲಿ ಕುಳಿತಿದ್ದ ಅಶ್ವಿತ್ ಕುಮಾರ್ ಅವರನ್ನು ಸ್ಥಳೀಯ ಯುವಕರು ಪತ್ತೆಹಚ್ಚಿದರು. ಎರಡು ದಿನಗಳ ಬಳಿಕ ಪತ್ತೆಯಾದ ಅಶ್ವಿತ್ ಕುಮಾರ್ ಅವರು ತೀವ್ರ ನಿತ್ರಾಣಗೊಂಡ ಸ್ಥಿತಿಯಲ್ಲಿದ್ದು, ಸ್ಥಳೀಯರು ಹಾಗೂ ಶೌರ್ಯ ತಂಡದ ಸದಸ್ಯರು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದರು.
ಹುಡುಕಾಟ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಎರಡು ದಿನಗಳ ಕಾಲ ಶ್ರಮಿಸಿದ ಸ್ವಯಂಸೇವಕರು, ಸ್ಥಳೀಯರು ಹಾಗೂ ತುರ್ತು ಸ್ಪಂದನಾ ತಂಡದ ಸದಸ್ಯರಿಗೆ ಅಶ್ವಿತ್ ಕುಮಾರ್ ಅವರ ಕುಟುಂಬದವರು ಕೃತಜ್ಞತೆ ಸಲ್ಲಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಅವರು ಕೂಡ ಸ್ವಯಂಸೇವಕರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ದೂರವಾಣಿ ಕರೆ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ ಅವರ ನೇತೃತ್ವದಲ್ಲಿ ಶಿಶಿಲ–ಅರಸಿನಮಕ್ಕಿ ಘಟಕದ ಸ್ವಯಂಸೇವಕರು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಶ್ರೀ ಧರ್ಮಸ್ಥಳ ತುರ್ತು ಸ್ಪಂದನಾ ತಂಡದ ಘಟಕ ಪ್ರತಿನಿಧಿ ಸುಲೈಮಾನ್, ರವೀಂದ್ರ, ಘಟಕ ಸಂಯೋಜಕಿ ರಶ್ಮಿತಾ ಹಾಗೂ ಇತರ ಸದಸ್ಯರು ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.


