






ಕೊಕ್ಕಡ: ಶಿಬಾಜೆ ಗ್ರಾಮದಲ್ಲಿ 2022ರ ಡಿಸೆಂಬರ್ 18ರಂದು ನಡೆದಿದ್ದ ಶ್ರೀಧರ ಕೊಲೆ ಪ್ರಕರಣ ಇದೀಗ ಮತ್ತೊಂದು ಮಹತ್ವದ ತಿರುವು ಪಡೆದಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಆರೋಪಿಗಳ ಮಂಪರು ಪರೀಕ್ಷೆ ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ನ್ಯಾಯಾಲಯದ ಅನುಮತಿ ಕೋರಿದ್ದರೂ, ಆರೋಪಿಗಳು ಇದೀಗ ನ್ಯಾಯಾಲಯದ ಮುಂದೆ ಪರೀಕ್ಷೆಗೆ ಒಳಪಡುವುದಿಲ್ಲ ಎಂದು ನಕಾರ ವ್ಯಕ್ತಪಡಿಸಿರುವುದು ತನಿಖೆಗೆ ಕುತೂಹಲ ಮೂಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಎಲ್. ಆನಂದ್ ಗೌಡ ಹಾಗೂ ಮಹೇಶ್ ಅವರನ್ನು ಮಂಪರು ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್‌ಗೆ ಒಳಪಡಿಸಲು ಎಸ್‌ಐಟಿ ಕ್ರಮ ಕೈಗೊಂಡಿತ್ತು. ಆರಂಭದಲ್ಲಿ ಎಸ್‌ಐಟಿ ಅಧಿಕಾರಿಗಳ ಎದುರು ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದ ನಾಲ್ವರು ಆರೋಪಿಗಳು, ಇದೀಗ ನ್ಯಾಯಾಲಯದ ಮುಂದೆ ತಮ್ಮ ನಿಲುವು ಬದಲಿಸಿಕೊಂಡು ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಶಿಬಾಜೆ ಗ್ರಾಮದ ಎ.ಸಿ. ಕುರಿಯನ್ ಮಾಲೀಕತ್ವದ ತೋಟದಲ್ಲಿ ಶ್ರೀಧರ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 2022ರ ಡಿಸೆಂಬರ್ 17ರಂದು ಸಂಜೆ 5.30ರ ಸುಮಾರಿಗೆ ಶ್ರೀಧರ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದ್ದು, ಮರುದಿನ ಡಿಸೆಂಬರ್ 18ರಂದು ಅವರು ಬೆತ್ತಲೆ ಸ್ಥಿತಿಯಲ್ಲಿ ಮೃತದೇಹವಾಗಿ ಪತ್ತೆಯಾಗಿದ್ದರು. ಈ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.
ಪ್ರಕರಣದ ತನಿಖೆಯನ್ನು ಸಿಐಡಿ ನಡೆಸಿ ಆರೋಪಿಗಳು ನಿರ್ದೋಷಿಗಳು ಎಂಬ ವರದಿ ಸಲ್ಲಿಸಿತ್ತು. ಆದರೆ, ಪ್ರಕರಣದ ತನಿಖೆ ಕುರಿತಾಗಿ ಹಲವಾರು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆಯ ಮೇರೆಗೆ ರಾಜ್ಯ ಸರ್ಕಾರವು ಮರುತನಿಖೆಗೆ ಆದೇಶಿಸಿತ್ತು. ಅದನ್ವಯ 2026ರ ಫೆಬ್ರವರಿ 20ರಂದು ರಾಜ್ಯ ಸರ್ಕಾರ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಿತ್ತು. ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಬೂರಾಮ್, ಉಡುಪಿ ಎಸ್ಪಿ ಹರಿರಾಮ್ ಶಂಕರ್ ಹಾಗೂ ಡಿವೈಎಸ್ಪಿ ಹರೀಶ್ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸುತ್ತಿದೆ.


