ಎಂಆರ್ಪಿಎಲ್ನ ಸಿಎಸ್ಆರ್ ಫಂಡ್ನ 10 ಲಕ್ಷ ರೂ. ಹಾಗೂ 75ರ ಆಚರಣಾ ಸಮಿತಿಯ 9.50 ಲಕ್ಷ ರೂ.ವೆಚ್ಚದ ಯೋಜನೆ







ನೆಲ್ಯಾಡಿ: 75ನೇ ವರ್ಷದ ಸಂಭ್ರಮದಲ್ಲಿರುವ ನೆಲ್ಯಾಡಿ ಪಿಎಂ ಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್ಪಿಎಲ್ನ ಸಿಎಸ್ಆರ್ ನಿಧಿಯ ₹10 ಲಕ್ಷ ಹಾಗೂ 75ರ ಆಚರಣಾ ಸಮಿತಿಯ ₹9.50 ಲಕ್ಷ ಸಹಕಾರದೊಂದಿಗೆ ನಿರ್ಮಾಣವಾಗಲಿರುವ ನೂತನ ಶೌಚಾಲಯ ಕಟ್ಟಡಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಶಾಸಕರು ಹಾಗೂ ಸಂಸದರ ಶಿಫಾರಸ್ಸಿನ ಮೇರೆಗೆ ಎಂಆರ್ಪಿಎಲ್ ವತಿಯಿಂದ ಶಾಲೆಗೆ ಶೌಚಾಲಯ ನಿರ್ಮಾಣಕ್ಕಾಗಿ ₹10 ಲಕ್ಷ ಅನುದಾನ ಮಂಜೂರಾಗಿದೆ. 75ರ ಆಚರಣಾ ಸಮಿತಿಯ ಸಹಕಾರದೊಂದಿಗೆ ಉತ್ತಮ ಮಾದರಿಯ ಹೈಟೆಕ್ ಶೌಚಾಲಯ ನಿರ್ಮಾಣವಾಗಲಿ, ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ತನಕವೂ ವಿದ್ಯಾಭ್ಯಾಸ ಸಿಗುವಂತಾಗಬೇಕು. ಎಸ್ಡಿಎಂಸಿ, ಶಿಕ್ಷಕರು ಹಾಗೂ ಪೋಷಕರು ಒಟ್ಟಾಗಿ ಕೈಜೋಡಿಸಿದಾಗ ಮಾತ್ರ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. 75ನೇ ವರ್ಷದ ಸಂಭ್ರಮದಲ್ಲಿರುವ ಈ ಶಾಲೆಯ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಿಸುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
75ರ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಶಾಲೆಗೆ 75 ವರ್ಷ ಪೂರ್ತಿಯಾಗಿರುವ ಹಿನ್ನೆಲೆಯಲ್ಲಿ ಸುಮಾರು ₹2 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆ ರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದೇವೆ. ಈ ಕಾರ್ಯಗಳಿಗೆ ಶಾಸಕರ ಸಹಕಾರವೂ ಅಗತ್ಯವಾಗಿದೆ ಎಂದು ಹೇಳಿದರು.
ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ, ನೋಟರಿ ಹಾಗೂ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ ಮಾತನಾಡಿ, ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣವಾಗಲಿದ್ದು, ಮುಂದಿನ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಸಕರ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.
ನೆಲ್ಯಾಡಿ ಗ್ರಾಮ ಪಂಚಾಯತ್ ಪಿಡಿಒ ಜಯರಾಜ್ ಮಾತನಾಡಿ, ನೆಲ್ಯಾಡಿ ಪಿಎಂ ಶ್ರೀ ಶಾಲೆ ರಾಜಕೀಯ ರಹಿತವಾಗಿ ಎಲ್ಲರ ಗಮನ ಸೆಳೆಯುತ್ತಿರುವ ಶಿಕ್ಷಣ ಸಂಸ್ಥೆಯಾಗಿದೆ. ಶಾಲೆಯ ಅಭಿವೃದ್ಧಿಗೆ ಗ್ರಾಮ ಪಂಚಾಯತ್ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ದಿನಕರ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಉಪಾಧ್ಯಕ್ಷೆ ನಸೀಮಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಶ್ರೀಧರ್ ಸ್ವಾಗತಿಸಿದರು. ಶಿಕ್ಷಕಿ ರತಿಲತಾ ವಂದಿಸಿದರು. ಶಿಕ್ಷಕ ವಿಮಲ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಶಕ್ತಿಕೇಂದ್ರದ ಅಧ್ಯಕ್ಷ ರವಿಪ್ರಸಾದ್ ಬಲ್ಯ, ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್ ದುರ್ಗಾಶ್ರೀ, ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಜಬ್ಬಾರ್, ಗೋಳಿತಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜನಾರ್ದನ ಪಟೇರಿ, ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ನೋಮಿಸ್ ಕುರಿಯಾಕೋಸ್, ಎಸ್ಡಿಎಂಸಿ ಸದಸ್ಯರಾದ ವಿಶ್ವನಾಥ, ಪ್ರಸಾದ್, 75ರ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.


