ತಡೆಗೋಡೆ, ಮೊಬೈಲ್ ನೆಟ್‌ವರ್ಕ್, ಸೇತುವೆ, ಕಾಲುಸಂಕ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರಿಂದ ಮನವಿ







ನೆಲ್ಯಾಡಿ: ಭಾಗೀರಥಿ ಮುರುಳ್ಯ ಅವರು ಮಂಗಳವಾರ ದಂದು ನೆಲ್ಯಾಡಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ತಡೆಗೋಡೆ ನಿರ್ಮಾಣ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ, ಸೇತುವೆ, ಕಾಲುಸಂಕ, ಬೀದಿ ದೀಪ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮನವಿ ಸಲ್ಲಿಸಿದರು.
ಪುಳಿತ್ತಡಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಒತ್ತಾಯ
ನೆಲ್ಯಾಡಿ ಗ್ರಾಮದ ಪುಳಿತ್ತಡಿ ಪ್ರದೇಶದಲ್ಲಿ ಕೃಷಿ ಜಮೀನಿನ ಪಕ್ಕದಲ್ಲಿ ಹರಿಯುವ ಹೊಳೆ ಕಳೆದ ಮಳೆಗಾಲದಲ್ಲಿ ಉಕ್ಕಿ ಹರಿದ ಪರಿಣಾಮ ಜಿ.ಪಂ. ಅನುದಾನದಲ್ಲಿ ನಿರ್ಮಿಸಲಾಗಿದ್ದ ಅಂದಾಜು 100 ಮೀಟರ್ ಉದ್ದದ ತಡೆಗೋಡೆ ಕೊಚ್ಚಿಹೋಗಿದೆ. ಪರಿಣಾಮವಾಗಿ ಹೊಳೆ ನೀರು ಕೃಷಿ ಜಮೀನಿಗೆ ನುಗ್ಗಿ ಕೃಷಿ ಹಾನಿಯಾಗುತ್ತಿದ್ದು, ತಡೆಗೋಡೆಯ ಮೇಲಿದ್ದ ಕಾಲುದಾರಿಯೂ ಕೊಚ್ಚಿಹೋಗಿರುವುದರಿಂದ ಸ್ಥಳೀಯ ನಿವಾಸಿಗಳ ಓಡಾಟಕ್ಕೂ ತೊಂದರೆಯಾಗಿದೆ. ಸುಮಾರು 100 ಎಕರೆ ಕೃಷಿ ಭೂಮಿ ಮಳೆ ನೀರಿನಿಂದ ಹಾನಿಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಹೊಳೆ ಬದಿಯಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಿ ಕೃಷಿ ರಕ್ಷಣೆ ಹಾಗೂ ಕಾಲುದಾರಿ ವ್ಯವಸ್ಥೆ ಕಲ್ಪಿಸಬೇಕೆಂದು ರಾಜುಗೌಡ ಅವರು ಶಾಸಕರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ, ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಎನ್.ಎಸ್. ಬೋಸರಾಜು ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಅನುದಾನ ನೀಡುವ ಭರವಸೆ ದೊರೆತಿದೆ ಎಂದು ತಿಳಿಸಿದರು.
ಸಮರಗುಂಡಿಯಲ್ಲಿ ಅಪಾಯದ ಅಂಚಿನಲ್ಲಿರುವ ಮನೆ
ಗೋಳಿತ್ತೊಟ್ಟು ಗ್ರಾಮದ ಸಮರಗುಂಡಿ ಪ್ರದೇಶದಲ್ಲಿ ಮಳೆಗಾಲದಲ್ಲಿ ಪಕ್ಕದ ತೋಡಿನಲ್ಲಿ ಹರಿಯುವ ಭಾರೀ ನೆರೆ ನೀರಿನಿಂದಾಗಿ ಬರೆ ಕುಸಿಯುತ್ತಿದ್ದು, ಮೇಲಿರುವ ಮನೆ ಅಪಾಯದ ಸ್ಥಿತಿಗೆ ತಲುಪಿದೆ. ಇಲ್ಲಿ ವಾಸಿಸುವ ಅಂಗವಿಕಲರು ಹಾಗೂ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ತಕ್ಷಣ ತಡೆಗೋಡೆ ನಿರ್ಮಿಸಿ ಅಪಾಯ ತಪ್ಪಿಸಬೇಕೆಂದು ಬಿ.ಆರ್. ಜಯಂತಿ ಶೆಟ್ಟಿ ಅವರು ಶಾಸಕರಿಗೆ ಮನವಿ ಸಲ್ಲಿಸಿದರು.
ಮೊಬೈಲ್ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಆಗ್ರಹ
ನೆಲ್ಯಾಡಿ ಗ್ರಾಮದ ಪುಚ್ಚೇರಿ, ಇಚ್ಚೂರು, ಕುಡ್ತಾಜೆ, ತೋಟ ಹಾಗೂ ಪಿಲವೂರು ಭಾಗಗಳಲ್ಲಿ ತೀವ್ರ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಎದುರಾಗಿರುವ ಕುರಿತು ಗ್ರಾಮಸ್ಥರು ಶಾಸಕರ ಗಮನ ಸೆಳೆದರು. ಸುಮಾರು 100ಕ್ಕೂ ಹೆಚ್ಚು ಮನೆಗಳು ಹಾಗೂ 750ಕ್ಕೂ ಅಧಿಕ ಜನಸಂಖ್ಯೆ ಇರುವ ಈ ಭಾಗದಲ್ಲಿ ಯಾವುದೇ ಮೊಬೈಲ್ ಟವರ್ ಇಲ್ಲದ ಕಾರಣ ಕರೆ ಮಾಡಲು ತೀವ್ರ ತೊಂದರೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದರು. ಮಾದೇರಿ ಭಾಗದಲ್ಲಿರುವ ಏರ್‌ಟೆಲ್ ಟವರ್‌ನಿಂದ ಮೊದಲು ರೇಂಜ್ ದೊರೆಯುತ್ತಿದ್ದರೂ ಇದೀಗ ಯಾವುದೇ ನೆಟ್‌ವರ್ಕ್ ಸಿಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಕರೆ ಮಾಡಲು ಎತ್ತರ ಪ್ರದೇಶಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ನೆಲ್ಯಾಡಿ ಗ್ರಾ.ಪಂ. ಮಾಜಿ ಸದಸ್ಯ ಆನಂದ ಪಿಲವೂರು ಅವರು ಮನವಿ ಸಲ್ಲಿಸಿ, ಈ ಭಾಗದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಗ್ರಾ.ಪಂ.ನಿಂದ ಮನವಿ:
ಗ್ರಾ.ಪಂ.ನಿಂದ ಗೋದಾಮು ಹಾಗೂ ಅಂಗನವಾಡಿ ಕಟ್ಟಡಕ್ಕೆ ಅನುದಾನ ಕೋರಿಕೆ
ನೆಲ್ಯಾಡಿ ಗ್ರಾಮ ಪಂಚಾಯಿತಿ ವತಿಯಿಂದ ಹೊಸ ಗೋದಾಮು ಕಟ್ಟಡ ಹಾಗೂ ಕೊಲ್ಯೊಟ್ಟು ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಲಾಯಿತು. ಕೊಲ್ಯೊಟ್ಟು ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಉದ್ಯೋಗ ಖಾತರಿ ಯೋಜನೆಯಡಿ ಅಲ್ಪ ಅನುದಾನ ಮೀಸಲಾಗಿದ್ದರೂ ಕಾಮಗಾರಿ ಪೂರ್ಣಗೊಳ್ಳಲು ಅನುದಾನದ ಕೊರತೆಯಿದೆ ಎಂದು ಪಿಡಿಒ ಜಯರಾಜ್ ತಿಳಿಸಿದರು. ಅಂಗನವಾಡಿ ಕಟ್ಟಡ ಪೂರ್ಣಗೊಳಿಸಲು ಸುಮಾರು 5 ಲಕ್ಷ ರೂ. ಹಾಗೂ ಗೋದಾಮು ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು.
ಸೇತುವೆ, ಕಾಲುಸಂಕ ಹಾಗೂ ಬೀದಿ ದೀಪಕ್ಕೆ ಬೇಡಿಕೆ:
ಮಾದೇರಿಕೊಪ್ಪ ರಸ್ತೆಯಿಂದ ಪಡುಬೆಟ್ಟು ಸಂಪರ್ಕಿಸುವ ರಸ್ತೆಯ ಅತ್ರಿಜಾಲು ಪ್ರದೇಶದಲ್ಲಿ ಸೇತುವೆ ನಿರ್ಮಿಸಲು ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದರು. ಕುತ್ರಾಡಿ ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಹೊರಾಂಗಣದ ಮೇಲ್ಛಾವಣಿ ಹಾಗೂ ಇಂಟರ್‌ಲಾಕ್ ಅಳವಡಿಕೆಗೆ ಸಹಾಯಧನ ನೀಡುವಂತೆಯೂ ದೇವಸ್ಥಾನ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಲಾಯಿತು. ಕೌಕ್ರಾಡಿ ಗ್ರಾಮದ 1ನೇ ವಾರ್ಡ್‌ನಲ್ಲಿ ಚಂದ್ರಶೇಖರ ಪೆಲತ್ತಿಂಜ ಅವರ ಮನೆಗೆ ತೆರಳುವ ರಸ್ತೆಯಲ್ಲಿ ನಾಲ್ಕೈದು ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಲುಸೇತುವೆ ನಿರ್ಮಾಣ ಹಾಗೂ ಪಟ್ಲಡ್ಕ-ಬೇರಿಕೆ ಮಾರ್ಗದಲ್ಲಿ ಕಾಡಾನೆಗಳ ಹಾವಳಿ ಇರುವುದರಿಂದ ಬೀದಿ ದೀಪ ಅಳವಡಿಸಲು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಗ್ರಾ.ಪಂ. ಮಾಜಿ ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಆನಂದ ಪಿಲವೂರು, ಪ್ರಕಾಶ್, ಕೌಕ್ರಾಡಿ ಗ್ರಾ.ಪಂ. ಮಾಜಿ ಸದಸ್ಯ ಮಹೇಶ್ ಪಟ್ಲಡ್ಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ, ಅಣ್ಣಿ ಎಲ್ತಿಮಾರ್, ರಮೇಶ್ ಶೆಟ್ಟಿ ಬೀದಿ, ಸುರೇಶ್ ಪಡಿಪಂಡ, ಬಾಲಕೃಷ್ಣ ತೋಟ, ಪಿಡಿಒ ಜಯರಾಜ್, ಕಾರ್ಯದರ್ಶಿ ಭಾರತಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಟೋಲ್ ಫ್ರೀ ನಿಯಮ ಜಾರಿಗೆ ಒತ್ತಾಯ
ಅಡ್ಡಹೊಳೆ-ಬಿ.ಸಿ.ರೋಡ್ ಚತುಷ್ಪಥ ಹೆದ್ದಾರಿಯ ವಳಾಲು ಸಮೀಪದ ಟೋಲ್‌ಗೇಟ್ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಗೆ ಟೋಲ್ ಫ್ರೀ ನಿಯಮ ಜಾರಿಗೊಳಿಸುವಂತೆ ನ್ಯಾಯವಾದಿ ಇಸ್ಮಾಯಿಲ್ ಅವರು ಶಾಸಕರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಹೊಸಮಜಲು ಪ್ರದೇಶದಲ್ಲಿ ಪ್ರಾಥಮಿಕ ಶಾಲೆ, ಮಸೀದಿ ಹಾಗೂ ಆಸ್ಪತ್ರೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ದಾಟಲು ಅನುಕೂಲವಾಗುವಂತೆ ‘ವಾಕಿಂಗ್ ಫುಟ್ ಓವರ್ ಬ್ರಿಡ್ಜ್’ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು. ಸಂಬಂಧಪಟ್ಟ ಇಂಜಿನಿಯರ್ ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕಿ ಭರವಸೆ ನೀಡಿದರು.
ಕಡಬ ತಾಲೂಕು ಕಚೇರಿಯಲ್ಲಿ ಕಡತ ಪೆಂಡಿಂಗ್ ಬಗ್ಗೆ ಆಕ್ರೋಶ:
ಕಡಬ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕಡತಗಳು ದೀರ್ಘಕಾಲದಿಂದ ಬಾಕಿ ಉಳಿದಿದ್ದು, ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಜಿ.ಪಂ. ಮಾಜಿ ಸದಸ್ಯ ಹಾಗೂ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಆರೋಪಿಸಿದರು. ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಅವರು ಶಾಸಕರ ಗಮನಕ್ಕೆ ತಂದರು.


