






ಬೆಳ್ತಂಗಡಿ : ಕಾರಿನಲ್ಲಿ ನಿಷೇಧಿತ ಎಂಡಿಎಂಎ (MDMA) ಮಾದಕ ವಸ್ತುವನ್ನು ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿ, ಸುಮಾರು ₹40 ಸಾವಿರ ಮೌಲ್ಯದ 4 ಗ್ರಾಂ ಎಂಡಿಎಂಎ ಮಾದಕ ವಸ್ತು ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮೇ 27ರಂದು ಸಂಜೆ ಕಂಬಳದಡ್ಡ ಪ್ರದೇಶದ ಗುರುವಾಯನಕೆರೆ–ಮೂಡಬಿದಿರೆ ಸಾರ್ವಜನಿಕ ರಸ್ತೆಯಲ್ಲಿ ನಾಕಾಬಂದಿ ಹಾಕಿ ವಾಹನ ತಪಾಸಣೆ ನಡೆಸಲಾಯಿತು. ಈ ವೇಳೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ಬರುತ್ತಿದ್ದ KA-13-P-2905 ಸಂಖ್ಯೆಯ i20 ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನಲ್ಲಿದ್ದ ನಿಷೇಧಿತ ಎಂಡಿಎಂಎ ಮಾದಕ ವಸ್ತು ಪತ್ತೆಯಾಯಿತು.
ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದ ಹಂಡೇಲು ನಿವಾಸಿ ಹೆಚ್. ಹುಸೇನ್ ಅವರ ಪುತ್ರ ತನ್ವೀರ್ (27) ಹಾಗೂ ಮೂಡಬಿದಿರೆ ತಾಲೂಕಿನ ಕಲ್ಲಬೆಟ್ಟು ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರ ಮಹಮ್ಮದ್ ಸಲ್ವಾನ್ (22) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು, ಈ ಮಾದಕ ವಸ್ತುವನ್ನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ನಿವಾಸಿ ಹಂಝತ್ ಕರಾರ್ ಎಂಬಾತ ಮಾರಾಟ ಮಾಡಲು ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರು ಸುಮಾರು ₹40 ಸಾವಿರ ಮೌಲ್ಯದ 4 ಗ್ರಾಂ ಎಂಡಿಎಂಎ ಮಾದಕ ವಸ್ತು ಮತ್ತು ಸುಮಾರು ₹2 ಲಕ್ಷ ಮೌಲ್ಯದ i20 ಕಾರನ್ನು ವಶಕ್ಕೆ ಪಡೆದಿದ್ದಾರೆ. ಪಂಚರು ಹಾಗೂ ಸೋಕೋ ತಂಡದ ಸಮ್ಮುಖದಲ್ಲಿ ಮಹಜರು ನಡೆಸಿ, ಆರೋಪಿಗಳಾದ ಮಹಮ್ಮದ್ ತನ್ವೀರ್, ಮಹಮ್ಮದ್ ಸಲ್ವಾನ್ ಹಾಗೂ ಪರಾರಿಯಾಗಿರುವ ಹಂಝತ್ ಕರಾರ್ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೇ 28ರಂದು ಮಂಗಳೂರು ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದ ಬಳಿಕ ತಲೆಮರೆಸಿಕೊಂಡಿರುವ ಮೂರನೇ ಆರೋಪಿ ಹಂಝತ್ ಕರಾರ್ ಬಂಧನಕ್ಕಾಗಿ ವೇಣೂರು ಪೊಲೀಸರು ಬಲೆ ಬೀಸಿದ್ದಾರೆ.
ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿನಿ ಸಿ.ಕೆ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಕ್ಷಯ್ ಡವಗಿ, ತನಿಖಾ ಸಬ್ ಇನ್ಸ್‌ಪೆಕ್ಟರ್ ಓಮನ ಹಾಗೂ ಸಿಬ್ಬಂದಿಗಳಾದ ಕೃಷ್ಣ, ಕೇಶವತಿ, ಮೋಹನ್ ಕುಮಾರ್, ವಸಂತ್ ಕುಮಾರ್, ಸಂತೋಷ್ ಮತ್ತು ರಾಕೇಶ್ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


