ಉಜಿರೆ ಸಿದ್ಧವನ ಗುರುಕುಲ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ತಾಣ : ಪ್ರೊ. ಎಸ್.ಎನ್. ಕಾಕತ್ಕರ್

ಶೇರ್ ಮಾಡಿ

 

ಉಜಿರೆ ಸಿದ್ಧವನ ಗುರುಕುಲ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ತಾಣ : ಪ್ರೊ. ಎಸ್.ಎನ್. ಕಾಕತ್ಕರ್

ಉಜಿರೆ : ವಸತಿ ನಿಲಯಗಳು ವಿದ್ಯಾರ್ಥಿಗಳ ಪಾಲಿಗೆ “ಮನೆಯಿಂದ ದೂರದ ಮತ್ತೊಂದು ಮನೆ”ಯಂತಿದ್ದು, ಇವು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ಸ್ವಾವಲಂಬನೆಯನ್ನು ಬೆಳೆಸುವ ಪ್ರಮುಖ ಕೇಂದ್ರಗಳಾಗಿವೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್. ಕಾಕತ್ಕರ್ ಹೇಳಿದರು.

ಅವರು ಮೇ 27ರಂದು ಉಜಿರೆಯ ಸಿದ್ಧವನ ಗುರುಕುಲದಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳ ಪೋಷಕರಿಗಾಗಿ ಆಯೋಜಿಸಲಾದ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.

ಸಿದ್ಧವನ ಗುರುಕುಲವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ತಾಣವಾಗಿದ್ದು, ಇಲ್ಲಿನ ಶಿಸ್ತುಬದ್ಧ ಹಾಗೂ ಪೂರಕ ವಾತಾವರಣ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಮನೋಭಾವ, ಸಮಯಪ್ರಜ್ಞೆ ಮತ್ತು ಉತ್ತಮ ನಡವಳಿಕೆಯನ್ನು ರೂಪಿಸುವಲ್ಲಿ ಗುರುಕುಲದ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಜೀವನ ಶಿಕ್ಷಣವನ್ನು ಕಲಿಸುವ ಸಿದ್ಧವನದ ವಾತಾವರಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದಾರಿದೀಪವಾಗಿದ್ದು, ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಬುನಾದಿಯಾಗಿದೆ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಪೂರಣ್ ವರ್ಮ, ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳುವಲ್ಲಿ ಸಿದ್ಧವನ ಗುರುಕುಲ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಸ್ವಚ್ಛತೆಯ ಕಡೆ ಹೆಚ್ಚಿನ ಗಮನ ಹರಿಸಿ, ನಿಗದಿತ ವೇಳಾಪಟ್ಟಿಯಂತೆ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಯುವರಾಜ ಪೂವಣಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಡಾ.ರಾಜೇಶ್ ಬಿ ಉಪಸ್ಥಿತರಿದ್ದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.

ಸಿದ್ಧವನ ಗುರುಕುಲದ ನಿಲಯ ಪಾಲಕ ಕೇಶವ ನಾಯಕ್ ಗುರುಕುಲದ ನೀತಿ-ನಿಯಮಗಳು, ಶಿಸ್ತುಬದ್ಧ ಜೀವನ ಕ್ರಮ ಹಾಗೂ ವಿದ್ಯಾರ್ಥಿಗಳು ಅನುಸರಿಸಬೇಕಾದ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದರು.

ಕನ್ನಡ ಭಾಷಾ ಪ್ರಾಧ್ಯಾಪಕ ಡಾ.ಮಹಾವೀರ ಜೈನ್ ಸ್ವಾಗತಿಸಿ, ನಿಲಯ ಪಾಲಕ ಕೇಶವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಲಕ್ಷ್ಮೀಶ ಭಟ್ ವಂದಿಸಿದರು.

 

Leave a Reply

error: Content is protected !!