






ಕೊಕ್ಕಡ :ಕಳೆಂಜ ಹಾಗೂ ಶಿಶಿಲ ಗ್ರಾಮದ ಸರ್ವೇ ನಂ.309ರ ವ್ಯಾಪ್ತಿಯ ಕೃಷಿಭೂಮಿಗೆ ಸಂಬಂಧಿಸಿದಂತೆ ಉಂಟಾಗಿರುವ ಅರಣ್ಯ ಇಲಾಖೆಯ ತೊಡಕುಗಳು ಮತ್ತು ಕಾನೂನು ಸಮಸ್ಯೆಗಳ ಕುರಿತು ಶಿಶಿಲ ಗ್ರಾಮಸ್ಥರೊಂದಿಗೆ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಹಾಗೂ ಮಂಗಳೂರು ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ) ಅವರೊಂದಿಗೆ ಮಹತ್ವದ ಸಭೆ ನಡೆಯಿತು.
ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಹಲವು ದಶಕಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರೂ, ಭೂಮಿಯ ಹಕ್ಕು ಹಾಗೂ ಅರಣ್ಯ ಇಲಾಖೆಯ ನಿಯಮಗಳಿಗೆ ಸಂಬಂಧಿಸಿದ ಕೆಲವು ತೊಡಕುಗಳಿಂದ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ವಿವರಿಸಿದರು. ಕೃಷಿ ಭೂಮಿಗೆ ಸಂಬಂಧಿಸಿದ ದಾಖಲೆಗಳ ಸಮಸ್ಯೆ, ಅರಣ್ಯ ಇಲಾಖೆಯ ವ್ಯಾಪ್ತಿಯ ಕುರಿತ ಗೊಂದಲಗಳು ಹಾಗೂ ರೈತರು ಎದುರಿಸುತ್ತಿರುವ ಆಡಳಿತಾತ್ಮಕ ಅಡೆತಡೆಗಳ ಕುರಿತು ಅಧಿಕಾರಿಗಳ ಗಮನ ಸೆಳೆಯಲಾಯಿತು.
ಸಮಸ್ಯೆಯ ಗಂಭೀರತೆಯನ್ನು ಮನಗಂಡ ಶಾಸಕ ಹರೀಶ್ ಪೂಂಜ, ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳೀಯರ ಅಹವಾಲುಗಳನ್ನು ಆಲಿಸಿ ವಾಸ್ತವಾಂಶಗಳ ಪರಿಶೀಲನೆ ನಡೆಸಿದರು. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕಾನೂನುಬದ್ಧ ಚೌಕಟ್ಟಿನೊಳಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ವಿವರವಾಗಿ ಮಂಡಿಸಿದ್ದು, ಸಂಬಂಧಿತ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ರೈತರು ಹಾಗೂ ಸ್ಥಳೀಯರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಸರ್ವೇ ನಂ.309ರ ವ್ಯಾಪ್ತಿಯ ಭೂಮಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿದು ರೈತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು.


