ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ 70 ಟನ್ ಹರಕೆ ಗಂಟೆ ವಿಲೇವಾರಿಗೆ ನಾಳೆ ಚಾಲನೆ







ನೆಲ್ಯಾಡಿ: ಐದು ವರ್ಷಗಳಿಂದ ಆಡಳಿತಾತ್ಮಕ ಮತ್ತು ತಾಂತ್ರಿಕ ಅಡೆ ತಡೆಗಳ ನಡುವೆ ಬಾಕಿಯಾಗಿದ್ದ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ಹರಕೆ ಗಂಟೆಗಳ ವಿಲೇವಾರಿ ಪ್ರಕ್ರಿಯೆಗೆ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದೆ.
ಭಕ್ತರಿಂದ ಹರಕೆ ರೂಪದಲ್ಲಿ ಸಮರ್ಪಿಸಲ್ಪಟ್ಟ ಸುಮಾರು 70 ಸಾವಿರ ಕೆಜಿ ಕಂಚಿನ ಗಂಟೆಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದ್ದು, ಜೂ.4ರಂದು ಗಂಟೆಗಳ ತೂಕ ಪರಿಶೀಲನೆ ಹಾಗೂ ವಿಲೇವಾರಿ ಕಾರ್ಯ ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿರುವ ಬಯಲು ಆಲಯ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನವು ‘ಗಂಟೆ ಗಣಪತಿ’ ಎಂದೇ ಪ್ರಸಿದ್ದಿ ಪಡೆದಿದೆ. ಇಲ್ಲಿ ಭಕ್ತರು ತಮ್ಮ ಮನೋಭಿಲಾಷೆ ಈಡೇರಿದ ಬಳಿಕ ಹರಕೆಯಾಗಿ ಗಂಟೆಗಳನ್ನು ಸಮರ್ಪಿಸುವ ಸಂಪ್ರದಾಯವಿದೆ. ವರ್ಷದಿಂದ ವರ್ಷಕ್ಕೆ ಸಾವಿರಾರು ಗಂಟೆಗಳು ಸೇರ್ಪಡೆಯಾಗುತ್ತಾ ಬಂದ ಪರಿಣಾಮ ದೇವಳದ ದಾಸ್ತಾನಿನಲ್ಲಿ ಗಂಟೆಗಳ ರಾಶಿಯೇ ನಿರ್ಮಾಣವಾಗಿತ್ತು.
ಈ ಹಿಂದೆ ಎರಡು ಬಾರಿ ಇ-ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದರೂ ಸಮರ್ಪಕ ಬಿಡರ್‌ಗಳ ಕೊರತೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಹರಾಜು ಪೂರ್ಣಗೊಳ್ಳದೆ ಉಳಿದಿತ್ತು. ಹೀಗಾಗಿ ಕೋಟ್ಯಂತರ ರೂ. ಮೌಲ್ಯದ ಗಂಟೆಗಳು ವರ್ಷಗಳ ಕಾಲ ಸ್ಟೋರ್ ರೂಮ್‌ನಲ್ಲೇ ಬಿದ್ದಿದ್ದವು. ಮಳೆಗಾಲದಲ್ಲಿ ನೀರು ನುಗ್ಗಿ ಗಂಟೆಗಳಿಗೆ ತುಕ್ಕು ಹಿಡಿಯುವ ಸ್ಥಿತಿಯೂ ಎದುರಾಗಿತ್ತು. ಇದರಿಂದ ಅವುಗಳ ಮೌಲ್ಯ ಕುಸಿಯುವ ಆತಂಕವೂ ವ್ಯಕ್ತವಾಗಿತ್ತು.
3.51 ಕೋಟಿಗೆ ಬಿಡ್: ಕರ್ನಾಟಕ ಸರಕಾರದ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಮೂಲಕ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಧಾರವಾಡದ ಉದ್ಯಮಿ ಈಶ್ವರ್ ಲಾಲ್ ಕನ್ಯಾಲಾಲ್ ಅಗ್ನಿಹೋತ್ರಿ ಅವರು 3,51,16,900 ರೂ. ಮೊತ್ತದ ಅಂತಿಮ ಬಿಡ್ ಸಲ್ಲಿಸಿ ಟೆಂಡರ್ ಪಡೆದಿದ್ದಾರೆ. ಟೆಂಡರ್ ಮೊತ್ತವನ್ನು ದೇವಸ್ಥಾನದ ಬ್ಯಾಂಕ್ ಆಫ್ ಬರೋಡಾ ಶಿಶಿಲ ಶಾಖೆಯ ಖಾತೆಗೆ ಜಮೆ ಮಾಡಲಾಗಿದೆ.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ನಿಯಮಗಳು-2002ರ ನಿಯಮ 40ಡಿ(4)ರ ಅನ್ವಯ ಟೆಂಡರ್ ಅಂಗೀಕರಿಸಲಾಗಿದ್ದು, ಜೂ.4ರಂದು ದೇವಸ್ಥಾನದ ದಾಸ್ತಾನಿನಲ್ಲಿರುವ ಸುಮಾರು 70 ಸಾವಿರ ಕೆಜಿ ಕಂಚಿನ ಗಂಟೆಗಳನ್ನು ಅಧಿಕೃತವಾಗಿ ತೂಕ ಮಾಡಿ ಟೆಂಡರ್‌ದಾರರಿಗೆ ಹಸ್ತಾಂತರಿಸುವ ಕಾರ್ಯ ನಿಗದಿಯಾಗಿದೆ.
ಈ ಹಿನ್ನೆಲೆಯಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿ ಕಾರಿಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ವಿಲೇವಾರಿ ಪ್ರಕ್ರಿಯೆಯ ಪರಿವೀಕ್ಷಣೆಗೆ ಧಾರ್ಮಿಕ ದತ್ತಿ ಇಲಾಖೆ ಅಧಿ ಕಾರಿಗಳನ್ನು ಹಾಗೂ ತೂಕ ಮತ್ತು ಮೌಲ್ಯಮಾಪನ ಇಲಾಖೆಯ ಪರೀಕ್ಷಕರನ್ನು ನಿಯೋಜಿಸುವಂತೆ ಮನವಿ ಮಾಡಿದ್ದಾರೆ. ಗಂಟೆಗಳ ತೂಕದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಿಖರ ಪರಿಶೀಲನೆ ನಡೆಸಲು ಸೂಚಿಸಲಾಗಿದೆ.
ವಿವಾದ, ಚರ್ಚೆ: ಸೌತಡ್ಕ ದೇವಸ್ಥಾನದಲ್ಲಿ ಗಂಟೆಗಳ ವಿಲೇವಾರಿ ವಿಚಾರ ಹಲವು ವರ್ಷಗಳಿಂದ ವಿವಾದ, ಆರೋಪ-ಪ್ರತ್ಯಾರೋಪಗಳಿಗೂ ಕಾರಣವಾಗಿತ್ತು. ಈ ನಡುವೆ ದೇವಸ್ಥಾನದ ಗಂಟೆ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರಗಳ ಕುರಿತ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು.
ಅಭಿವೃದ್ಧಿಗೆ ಹಣ ಬಳಕೆ: ಹರಾಜಿನಿಂದ ಬಂದಿರುವ 3.51 ಕೋಟಿ ರೂ. ಮೊತ್ತವನ್ನು ದೇವಸ್ಥಾನದ ಮೂಲಸೌಕರ್ಯ ಅಭಿವೃದ್ಧಿ, ಭಕ್ತರಿಗೆ ಅಗತ್ಯ ಸೌಲಭ್ಯ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಸಾಧ್ಯತೆಗಳಿವೆ. ಹರಕೆ ಗಂಟೆಗಳ ರಾಶಿಯಿಂದ ಗುರುತಿಸಿಕೊಂಡಿದ್ದ ಸೌತಡ್ಕ ಕ್ಷೇತ್ರದಲ್ಲಿ ಈಗ ಆ ಗಂಟೆಗಳೇ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದ್ದು, ಭಕ್ತ ವಲಯದಲ್ಲಿ ಸಂತಸ ಮನೆ ಮಾಡಿದೆ.
ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಾಕಿಯಾಗಿದ್ದ ಹರಕೆ ಗಂಟೆಗಳ ವಿಲೇವಾರಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿರುವುದು ಸಂತಸದ ವಿಚಾರ. ಹರಾಜಿನಿಂದ ಬಂದಿರುವ ಹಣವನ್ನು ಭಕ್ತರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು, ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಲಾಗುವುದು.
-ಸುಬ್ರಹ್ಮಣ್ಯ ಶಬರಾಯ, ಅಧ್ಯಕ್ಷರು, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ
ಸೌತಡ್ಕ ಕ್ಷೇತ್ರದ ಹರಕೆ ಗಂಟೆಗಳ ವಿಲೇವಾರಿ ವಿಚಾರ ಹಲವು ವರ್ಷಗಳಿಂದ ಚರ್ಚೆಯಲ್ಲಿದ್ದು, ಈಗ ಹರಾಜು ಯಶಸ್ವಿಯಾಗಿ ಪೂರ್ಣಗೊಂಡು ವಿಲೇವಾರಿಗೆ ದಿನಾಂಕ ನಿಗದಿಯಾಗಿರುವುದು ಸಂತೋಷ ದೇವಸ್ಥಾನದ ದಾಸ್ತಾನಿನಲ್ಲಿ ಸಂಗ್ರಹವಾಗಿದ್ದ ಸಾವಿರಾರು ಕೆಜಿ ಗಂಟೆಳನ್ನು ವೈಜ್ಞಾನಿಕ ಹಾಗೂ ಪಾರದರ್ಶಕ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
-ವಿಶ್ವನಾಥ ಕೊಲ್ಲಾಜೆ, ಸದಸ್ಯರು, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ


