ಗೋಳಿತೊಟ್ಟು ವಿನಾಯಕ ಬೆಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ

ಶೇರ್ ಮಾಡಿ

 

ಗೋಳಿತೊಟ್ಟು ವಿನಾಯಕ ಬೆಟ್ಟದಲ್ಲಿ ವಿಶ್ವ ಪರಿಸರ ದಿನಾಚರಣೆ

ನೆಲ್ಯಾಡಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ವಿನಾಯಕ ಬೆಟ್ಟದ ಆವರಣದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಶಿಶು ಮಂದಿರ ಗೋಳಿತೊಟ್ಟು ಹಾಗೂ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಲಾಯಿತು.

ಕಾರ್ಯಕ್ರಮಕ್ಕೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹೆಚ್.ಪಿ. ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಅರಣ್ಯಗಳ ಬಗ್ಗೆ ಜನರಲ್ಲಿ ಹೆಚ್ಚಿನ ಕಾಳಜಿ ಮತ್ತು ಒಲವು ಮೂಡಬೇಕಾಗಿದೆ ಎಂದು ಹೇಳಿದರು. ಕೇವಲ ಗಿಡ ನೆಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುವುದಿಲ್ಲ. ನೆಟ್ಟ ಗಿಡಗಳನ್ನು ಪೋಷಿಸಿ ಹೆಮ್ಮರಗಳಾಗಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪರಿಸರ ಸಮತೋಲನ ಕಾಪಾಡಲು ಅರಣ್ಯ ಸಂಪತ್ತಿನ ರಕ್ಷಣೆ ಅತ್ಯಂತ ಅಗತ್ಯವಾಗಿದ್ದು, ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸಿಕೊಡುವ ಸಂಕಲ್ಪವನ್ನು ಎಲ್ಲರೂ ಮಾಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ನಾಗೇಶ್ ಶೆಟ್ಟಿ ಸಮರಗುಂಡಿ, ಶಿಶು ಮಂದಿರದ ಅಧ್ಯಕ್ಷ ಪುರುಷೋತ್ತಮ ಗೌಡ, ಸಿದ್ಧಿವಿನಾಯಕ ಕಲಾ ಮಂದಿರದ ಅಧ್ಯಕ್ಷ ಬಾಲಕೃಷ್ಣ ಅಲೆಕಿ, ಮಾಜಿ ಸೇವಾ ಸಮಿತಿ ಅಧ್ಯಕ್ಷ ವೆಂಕಪ್ಪ ಗೌಡ ಡೆಬ್ಬೆಲೀ, ಮಾಜಿ ಪಂಚಾಯತ್ ಸದಸ್ಯ ಜನಾರ್ದನ ಗೌಡ ಪಟೇರಿ, ಮಾಜಿ ಎಪಿಎಂಸಿ ಸದಸ್ಯ ಕುಶಾಲಪ್ಪ ಗೌಡ, ಶಿಶು ಮಂದಿರದ ಕಾರ್ಯದರ್ಶಿ ಕರುಣಾಕರ, ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಆಚಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಶಿಶು ಮಂದಿರದ ಮಾತಾಜಿಯರು ಹಾಗೂ ಮಕ್ಕಳು ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ವಿನಯ್ ಚಂದ್ರ ಹಾಗೂ ದೀಕ್ಷಾ ಕೆ., ಅರಣ್ಯ ವೀಕ್ಷಕ ದಿನೇಶ್, ಆನೆ ಕಾರ್ಯಪಡೆಯ ಸಿಬ್ಬಂದಿಗಳು ಹಾಗೂ ಸಿದ್ಧಿವಿನಾಯಕ ಸೇವಾ ಸಮಿತಿಯ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸುಭಾಷ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

 

Leave a Reply

error: Content is protected !!