70 ಟನ್ ಹರಕೆ ಘಂಟಾಮಣಿಗಳ ವಿಲೇವಾರಿಗೆ ಚಾಲನೆ; ₹3.51 ಕೋಟಿ ದೇವಳ ಖಾತೆಗೆ ಜಮೆ – ಅಭಿವೃದ್ಧಿ ಕಾಮಗಾರಿಗಳಿಗೆ ವೇಗ







ಕೊಕ್ಕಡ: ಕಳೆದ ಆರು ವರ್ಷಗಳಿಂದ ವಿವಿಧ ಆಡಳಿತಾತ್ಮಕ ಹಾಗೂ ತಾಂತ್ರಿಕ ಕಾರಣಗಳಿಂದ ವಿಲೇವಾರಿಯಾಗದೆ ದಾಸ್ತಾನಾಗಿದ್ದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸುಮಾರು 70 ಸಾವಿರ ಕಿಲೋ ತೂಕದ ಕಂಚಿನ ಹರಕೆ ಘಂಟಾಮಣಿಗಳ ವಿಲೇವಾರಿಗೆ ಗುರುವಾರ ಅಧಿಕೃತ ಚಾಲನೆ ದೊರೆಯಿತು. ಸುಮಾರು 70 ಟನ್ ತೂಕದ ಘಂಟಾಮಣಿಗಳು ಒಟ್ಟು ₹3,51,16,900 ಮೊತ್ತಕ್ಕೆ ಹರಾಜಾಗಿದ್ದು, ದೇವಸ್ಥಾನದ ಇತಿಹಾಸದಲ್ಲೇ ಅತಿ ದೊಡ್ಡ ವಿಲೇವಾರಿ ಪ್ರಕ್ರಿಯೆಯಾಗಿ ದಾಖಲಾಗಿದೆ.

ಧಾರವಾಡದ ಈಶ್ವರ್ ಲಾಲ್ ಕನ್ಯಾಲಾಲ್ ಅಗ್ನಿಹೋತ್ರಿ ಅವರು ಅತಿ ಹೆಚ್ಚು ಬಿಡ್ಡು ಸಲ್ಲಿಸಿದ ಟೆಂಡರ್‌ದಾರರಾಗಿದ್ದು, ಕಿಲೋಗ್ರಾಂಗೆ ₹425.14 ದರ ನಿಗದಿಪಡಿಸಲಾಗಿದೆ. ಶೇ.18 ಜಿಎಸ್ಟಿ ಸೇರಿ ಕಿಲೋಗ್ರಾಂಗೆ ₹501.67ರಂತೆ ಒಟ್ಟು ₹3.51 ಕೋಟಿ ಮೊತ್ತಕ್ಕೆ ಘಂಟಾಮಣಿಗಳು ಮಾರಾಟಗೊಂಡಿವೆ. ಟೆಂಡರ್‌ದಾರರು ಏಪ್ರಿಲ್ 10 ಹಾಗೂ ಮೇ 5ರಂದು ಎರಡು ಕಂತುಗಳಲ್ಲಿ ಸಂಪೂರ್ಣ ಮೊತ್ತವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ.

ಗುರುವಾರ ಬೆಳಗ್ಗೆಯಿಂದಲೇ ವಿಲೇವಾರಿ ಕಾರ್ಯ ಆರಂಭಗೊಂಡಿದ್ದು, ಸುಮಾರು 2,800 ಬ್ಯಾಗ್‌ಗಳಲ್ಲಿ ಸಂಗ್ರಹಿಸಲಾಗಿದ್ದ ಘಂಟಾಮಣಿಗಳನ್ನು 3 ಲಾರಿಗಳಿಗೆ ತುಂಬಿಸಿ ಸಾಗಿಸುವ ಕಾರ್ಯಭರದಿಂದ ನಡೆಯುತ್ತಿದೆ. ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕವಾಗಿಡುವ ಉದ್ದೇಶದಿಂದ ಉಪ್ಪಿನಂಗಡಿ ಸಮೀಪದ ಮಠದಲ್ಲಿರುವ ಅಶೋಕ್ ಅವರ ಮಾಲಕತ್ವದ ವೇಬ್ರಿಡ್ಜ್‌ನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ತೂಕ ಪರಿಶೀಲನೆ ನಡೆಸಲಾಯಿತು. ಮೊದಲು ಖಾಲಿ ಲಾರಿಯ ತೂಕ ದಾಖಲಿಸಿ, ಬಳಿಕ ಘಂಟಾಮಣಿಗಳನ್ನು ತುಂಬಿದ ನಂತರ ಮರುತೂಕ ಮಾಡುವ ಮೂಲಕ ನಿಖರ ತೂಕವನ್ನು ಖಚಿತಪಡಿಸಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಂಪೂರ್ಣ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣವೂ ನಡೆಯುತ್ತಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ.
ಧಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಪ್ರವೀಣ್, ತೂಕ ಮತ್ತು ಮಾಪನ ಇಲಾಖೆಯ ನಿರೀಕ್ಷಣಾಧಿಕಾರಿ ನರೇಂದ್ರ, ದೇವಸ್ಥಾನದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಸದಸ್ಯರಾದ ವಿಶ್ವನಾಥ ಕೊಲ್ಲಾಜೆ, ಗಣೇಶ್ ಕಾಶಿ ಮತ್ತು ಸಮಿತಿಯ ಸದಸ್ಯರು ಹಾಗೂ ದೇವಸ್ಥಾನದ ಸಿಬ್ಬಂದಿಗಳ ಸಮ್ಮುಖದಲ್ಲಿ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ.
ದೇವಳ ಅಭಿವೃದ್ಧಿಗೆ ಭಾರಿ ಯೋಜನೆಗಳು
ಘಂಟಾಮಣಿಗಳ ಮಾರಾಟದಿಂದ ಬಂದಿರುವ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲು ಆಡಳಿತ ಸಮಿತಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಗಣಪತಿ ದೇವರ ಎಡಭಾಗದಲ್ಲಿರುವ 4.98 ಎಕರೆ ಜಮೀನನ್ನು ಖರೀದಿಸಲು ತೀರ್ಮಾನಿಸಲಾಗಿದ್ದು, ಈ ಜಮೀನಿನ ಮೌಲ್ಯವನ್ನು ಸುಮಾರು ₹2 ಕೋಟಿ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇದರ ಜೊತೆಗೆ ಬಯಲು ಕಲಾಮಂದಿರದ ಎದುರು ₹25 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಸುಮುಖ ಅನ್ನಛತ್ರದ ಮೇಲಂತಸ್ತಿನಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ, ಎರಡು ಲಿಫ್ಟ್ ಅಳವಡಿಕೆ ಹಾಗೂ ಯಾತ್ರಿಕರಿಗೆ ಅಗತ್ಯ ಸೌಲಭ್ಯಗಳ ಒದಗಿಕೆಗೆ ಯೋಜನೆ ರೂಪಿಸಲಾಗಿದೆ.
ಮುಂದಿನ ಯೋಜನೆಗಳು :
ಯಾಗಶಾಲೆ ನಿರ್ಮಾಣ, ಹುಂಡಿಯ ಹಣ ಎಣಿಕೆಗೆ ವಿಶಾಲ ಸಭಾಂಗಣ, ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಗಳನ್ನು ಒಳಗೊಂಡ ಮೂರು ಅಂತಸ್ತಿನ ಆಡಳಿತ ಕಟ್ಟಡ ಹಾಗೂ ಸುಮಾರು ₹50 ಲಕ್ಷ ವೆಚ್ಚದಲ್ಲಿ ಆಧುನಿಕ ಪ್ರಸಾದ ತಯಾರಿಕಾ ಘಟಕ ನಿರ್ಮಾಣಕ್ಕೂ ಯೋಜನೆ ಸಿದ್ಧವಾಗಿದೆ.
ಯಾತ್ರಾಗೃಹ ಉದ್ಘಾಟನೆಗೆ ಸಿದ್ಧತೆ
ದೇವಸ್ಥಾನದ ಬಲಭಾಗದಲ್ಲಿರುವ ಯಾತ್ರಾಗೃಹ ಹಲವು ವರ್ಷಗಳಿಂದ ಉದ್ಘಾಟನೆಗಾಗಿ ಕಾಯುತ್ತಿತ್ತು. ವಿದ್ಯುತ್ ಹಾಗೂ ಇತರೆ ಮೂಲಸೌಕರ್ಯ ಕೊರತೆಗಳಿಂದ ಬಳಕೆಗೆ ಬರದಿದ್ದ ಈ ಕಟ್ಟಡದಲ್ಲಿ ಇದೀಗ ಜನರೇಟರ್, ಸೋಲಾರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಯಾತ್ರಾಗೃಹದಲ್ಲಿ ಒಟ್ಟು 10 ಕೊಠಡಿಗಳಿವೆ.
ನಮ್ಮ ಕೆಲಸಗಳೇ ಉತ್ತರ ನೀಡುತ್ತವೆ
ಹರಾಜು ಮೌಲ್ಯ ₹3 ಕೋಟಿಗೂ ಅಧಿಕವಾಗಿರುವುದರಿಂದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಅನುಮೋದನೆ ಪಡೆದು ನಿಯಮಾನುಸಾರ ವಿಲೇವಾರಿ ಪ್ರಕ್ರಿಯೆ ನಡೆಸಲಾಗಿದೆ. ಕೆಲವರು ಅನಗತ್ಯ ಆರೋಪಗಳನ್ನು ಮಾಡುತ್ತಿದ್ದರೂ ನಮ್ಮ ಕೆಲಸಗಳೇ ಉತ್ತರ ನೀಡುತ್ತವೆ. 70 ಸಾವಿರ ಕಿಲೋ ಘಂಟಾಮಣಿಗಳ ವಿಲೇವಾರಿ ದೇವಸ್ಥಾನದ ಇತಿಹಾಸದಲ್ಲಿ ಮಹತ್ವದ ಘಟ್ಟವಾಗಿದೆ. ಬಂದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಸದ್ಬಳಕೆ ಮಾಡಲಾಗುತ್ತದೆ.
– ಸುಬ್ರಹ್ಮಣ್ಯ ಶಬರಾಯ, ಅಧ್ಯಕ್ಷರು, ಸೌತಡ್ಕ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ
ಎಲ್ಲಾ ಹಂತಗಳಲ್ಲೂ ಪಾರದರ್ಶಕತೆ
ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಂತೆ ಸಂಪೂರ್ಣ ಕಾನೂನುಬದ್ಧ ಹಾಗೂ ಪಾರದರ್ಶಕವಾಗಿ ವಿಲೇವಾರಿ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿಯೊಂದು ಹಂತವನ್ನೂ ಅಧಿಕಾರಿಗಳ ಸಮ್ಮುಖದಲ್ಲಿ ದಾಖಲಾತಿ ಹಾಗೂ ವಿಡಿಯೋ ಚಿತ್ರೀಕರಣದೊಂದಿಗೆ ನಡೆಸಲಾಗುತ್ತಿದೆ.
– ಪ್ರವೀಣ್, ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ
ನಿಖರ ತೂಕಕ್ಕೆ ವಿಶೇಷ ಮೇಲ್ವಿಚಾರಣೆ
ಘಂಟಾಮಣಿಗಳ ತೂಕದಲ್ಲಿ ಯಾವುದೇ ವ್ಯತ್ಯಾಸ ಉಂಟಾಗದಂತೆ ಇಲಾಖೆಯ ವತಿಯಿಂದ ನೇರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಖಾಲಿ ಹಾಗೂ ತುಂಬಿದ ಲಾರಿಗಳ ತೂಕವನ್ನು ದಾಖಲಿಸಿ ನಿಖರ ಅಳತೆ ಖಚಿತಪಡಿಸಿಕೊಳ್ಳಲಾಗುತ್ತದೆ.
– ನರೇಂದ್ರ, ತೂಕ ಮತ್ತು ಮಾಪನ ನಿರೀಕ್ಷಣಾಧಿಕಾರಿ


