ಕೊಕ್ಕಡ- ಶಿಶಿಲ- ಪಟ್ರಮೆ ಭಾಗದ ವಿದ್ಯಾರ್ಥಿಗಳ ನರಕಯಾತನೆ | ಹೆಚ್ಚುವರಿ ಬಸ್ಗಾಗಿ ಸಾರ್ವಜನಿಕರ ಆಗ್ರಹ







ಕೊಕ್ಕಡ: ಕಾಲೇಜುಗಳು ರಾಜ್ಯಾದ್ಯಂತ ಶಾಲಾ-ಪುನರಾರಂಭಗೊಂಡು ಶಿಕ್ಷಣ ಸಂಸ್ಥೆಗಳಲ್ಲಿ ಮತ್ತೆ ವಿದ್ಯಾರ್ಥಿಗಳ ಕಲರವ ಮೊಳಗತೊಡಗಿದೆ. ಮಕ್ಕಳ ಭವಿಷ್ಯದ ಕನಸು ಹೊತ್ತು ಪೋಷಕರು ಅವರನ್ನು ಶಾಲೆ- ಕಾಲೇಜುಗಳಿಗೆ ಕಳುಹಿಸುತ್ತಿದ್ದರೆ, ಗ್ರಾಮೀಣ ಭಾಗದ ನೂರಾರು ವಿದ್ಯಾರ್ಥಿಗಳು ಮಾತ್ರ ಪ್ರತಿದಿನವೂ ಜೀವ ಕೈಯಲ್ಲಿ ಹಿಡಿದು ಶಿಕ್ಷಣಕ್ಕಾಗಿ ಪ್ರಯಾಣಿಸುವ ದುಸ್ಥಿತಿ ಎದುರಿಸುತ್ತಿದ್ದಾರೆ.
ಶಾಲೆ-ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಶಿಕ್ಷಣದ ಹುಡುಕಾಟದಲ್ಲಿ ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ನೆಲ್ಯಾಡಿ, ಉಪ್ಪಿನಂಗಡಿ, ಪುತ್ತೂರು ಸೇರಿದಂತೆ ನಗರ ಪ್ರದೇಶಗಳ ಕಾಲೇಜುಗಳಿಗೆ ದಾಖಲಿಸುತ್ತಿದ್ದಾರೆ. ಶಿಕ್ಷಣಕ್ಕಾಗಿ ಹೊರಡುವ ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯವಿಲ್ಲದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಒಂದೇ ಬಸ್ ಅವಲಂಬನೆ: ಪಟ್ಟೂರು, ಪಟ್ರಮೆ, ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಕೊಕ್ಕಡ ಸೇರಿದಂತೆ ಹಲವಾರು ಗ್ರಾಮೀಣ ಪ್ರದೇಶಗಳಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ನಗರ ಪ್ರದೇಶಗಳಿಗೆ ಸಂಚರಿಸುತ್ತಾರೆ. ಆದರೆ ಈ ಭಾಗಗಳಲ್ಲಿ ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರ ಅತ್ಯಂತ ವಿರಳವಾಗಿದೆ. ಬೆಳಗಿನ ವೇಳೆಯಲ್ಲಿ ಕೊಕ್ಕಡದಿಂದ 7.15ಕ್ಕೆ ಹೊರಡುವ ಶಿಶಿಲ ಬಸ್ ಬಳಿಕ ಸುಮಾರು 8.15ಕ್ಕೆ ಪಟ್ರಮೆಯಿಂದ ಬರುವ ಬಸ್ ಮಾತ್ರ ವಿದ್ಯಾರ್ಥಿಗಳಿಗೆ ಪ್ರಮುಖ ಆಧಾರವಾಗಿದೆ. ಇದೇ ಬಸ್ನಲ್ಲಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಸರಕಾರಿ ಹಾಗೂ ಖಾಸಗಿ ನೌಕರರು, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರು ಸೇರಿ 60ರಿಂದ 70ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಒಂದೇ ಬಸ್ನಲ್ಲಿ ಇಷ್ಟೊಂದು ಜನರನ್ನು ಕಿಕ್ಕಿರಿದು ತುಂಬಿಸುವ ಪರಿಣಾಮ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವುದು ಬಿಡಿ, ನಿಲ್ಲಲೂ ಜಾಗ ಸಿಗುವುದಿಲ್ಲ.
ಫುಟ್ಬೋರ್ಡ್ ಪ್ರಯಾಣ
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ಬಸ್ನ ಫುಟ್ ಬೋರ್ಡ್ನಲ್ಲಿ ನೇತಾಡಿಕೊಂಡು ಪ್ರಯಾಣಿಸುವ ದೃಶ್ಯ ಸಾಮಾನ್ಯವಾಗಿದೆ. ಕೆಲವರು ಬಾಗಿಲಿನ ಬಳಿ ಅಪಾಯಕಾರಿಯಾಗಿ ನಿಂತರೆ, ಇನ್ನೂ ಕೆಲವರು ಹೊರಭಾಗಕ್ಕೆ ಅರ್ಧ ದೇಹವನ್ನು ಚಾಚಿಕೊಂಡೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಒಂದು ಕ್ಷಣದ ಅಜಾಗರೂಕತೆ ಅಥವಾ ವಾಹನ ಚಾಲಕರ ಸಣ್ಣ ತಪ್ಪು ಕೂಡ ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಇನ್ನಷ್ಟು ಬಸ್ ಓಡಲಿ
ಬೆಳಗ್ಗೆ 8 ಗಂಟೆಗೆ ಕೊಕ್ಕಡದಿಂದ ಉಪ್ಪಿನಂಗಡಿಗೆ ಹಾಗೂ ಸಂಜೆ 4.30ಕ್ಕೆ ಉಪ್ಪಿನಂಗಡಿಯಿಂದ ಕೊಕ್ಕಡಕ್ಕೆ ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್ ಸಂಚಾರ ಕೂಡಲೇ ಆರಂಭಿಸಬೇಕು. ಅಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವ ಪ್ರತಿಯೊಂದು ಸರಕಾರಿ ಬಸ್ನಲ್ಲೂ ಸುರಕ್ಷಿತ ಸ್ವಯಂಚಾಲಿತ ಬಾಗಿಲು ವ್ಯವಸ್ಥೆ ಕಡ್ಡಾಯಗೊಳಿಸಬೇಕು ಎಂದು ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ
ವಿದ್ಯಾರ್ಥಿಗಳ ಸುರಕ್ಷತೆ ಕೇವಲ ಪೋಷಕರ ಜವಾಬ್ದಾರಿ ಮಾತ್ರವಲ್ಲ, ಅದು ಸರಕಾರ ಮತ್ತು ಸಾರಿಗೆ ಇಲಾಖೆಯ ಹೊಣೆಗಾರಿಕೆಯೂ ಹೌದು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಜೀವ ಪಣಕ್ಕಿಟ್ಟು ಪ್ರಯಾಣಿಸುವ ಪರಿಸ್ಥಿತಿ ಮುಂದುವರಿದರೆ, ಅದು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿಯಾಗಲಿದೆ. ಅನಾಹುತ ಸಂಭವಿಸಿದ ಬಳಿಕ ತನಿಖೆ, ಪರಿಹಾರ ಮತ್ತು ಭರವಸೆಗಳ ಸುರಿಮಳೆ ಸುರಿಸುವುದಕ್ಕಿಂತ, ಅಪಾಯದ ಮುನ್ಸೂಚನೆ ಇರುವಾಗಲೇ ಅಗತ್ಯ ಕ್ರಮ ಕೈಗೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ. ವಿದ್ಯಾರ್ಥಿಗಳ ಜೀವದ ಜತೆ ಚೆಲ್ಲಾಟವಾಡುವ ಈ ನಿರ್ಲಕ್ಷ್ಯಕ್ಕೆ ಕೊನೆ ಹಾಡಿ, ಕೊಕ್ಕಡ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಗೆ ತುರ್ತಾಗಿ ಹೆಚ್ಚುವರಿ ಬಸ್ ಸೇವೆ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಳಗ್ಗೆ ಬಸ್ ಬಂದ ಕೂಡಲೇ ಎಲ್ಲರೂ ಒಮ್ಮೆಲೆ ಬಸ್ ಏರುತ್ತಾರೆ. ಒಳಗೆ ನಿಲ್ಲಲು ಜಾಗ ಸಿಗುವುದಿಲ್ಲ. ಹಲವಾರು ಬಾರಿ ಫುಟ್ಬೋರ್ಡ್ನಲ್ಲಿ ನಿಂತೇ ಉಪ್ಪಿ ನಂಗಡಿ ಹಾಗೂ ನೆಲ್ಯಾಡಿವರೆಗೆ ಹೋಗಬೇಕಾಗುತ್ತದೆ. ಪರೀಕ್ಷೆ ದಿನಗಳಲ್ಲೂ ಇದೇ ಪರಿಸ್ಥಿತಿ. ಹೆಚ್ಚುವರಿ ಬಸ್ ಹಾಕಿದರೆ ನಮಗೆ ತುಂಬಾ ಅನುಕೂಲವಾಗುತ್ತದೆ.
-ಆಯುಷ್ ಪಿ., ವಿದ್ಯಾರ್ಥಿ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ.
ಮಕ್ಕಳು ಸುರಕ್ಷಿತವಾಗಿ ಶಾಲೆ- ಕಾಲೇಜಿಗೆ ತಲುಪುತ್ತಾರೆಯೇ ಎಂಬ ಚಿಂತೆಯಲ್ಲೇ ದಿನ ಕಳೆಯುತ್ತಿದ್ದೇವೆ. ಪ್ರತಿದಿನ ಫುಟ್ ಬೋರ್ಡ್ಲ್ಲಿ ಪ್ರಯಾಣಿಸುತ್ತಿರುವ ದೃಶ್ಯ ನೋಡಿದಾಗ ಹೃದಯ ನಡುಗುತ್ತದೆ. ಅನಾಹುತ ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವುದರಿಂದ ಪ್ರಯೋಜನವಿಲ್ಲ. ಈಗಲೇ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು.
-ಮಮತಾ ವಸಂತ, ಉಪನ್ಯಾಸಕಿ, ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ನೆಲ್ಯಾಡಿ.


