ಶಿಶಿಲ: ಉಚಿತ ಆರೋಗ್ಯ ತಪಾಸಣಾ ಶಿಬಿರ: ನೂರಾರು ಗ್ರಾಮಸ್ಥರಿಗೆ ಆರೋಗ್ಯ ಸೇವೆಯ ಸದುಪಯೋಗ

ಶೇರ್ ಮಾಡಿ

 

ಕೊಕ್ಕಡ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ವತಿಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಕನಸಿನ ಜ್ಞಾನ ವಿಕಾಸ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ವಲಯದ ಶಿಶಿಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರದಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಉಜಿರೆಯ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಶಿಬಿರದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆಗಳನ್ನು ನೀಡಿತು. ಕಾರ್ಯಕ್ರಮವನ್ನು ಶಿಶಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ರಮೇಶ್ ಉದ್ಘಾಟಿಸಿದರು.

ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ ಅವರು ಆಸ್ಪತ್ರೆಯಲ್ಲಿ ಲಭ್ಯವಿರುವ ಆಧುನಿಕ ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಆಸ್ಪತ್ರೆಯ ಸಮನ್ವಯ ಅಧಿಕಾರಿ ಹೇಮಾವತಿ ಅವರು ಆಸ್ಪತ್ರೆಯ ವಿವಿಧ ವಿಭಾಗಗಳು, ತಜ್ಞ ವೈದ್ಯರ ಸೇವೆಗಳು, ವೈದ್ಯಕೀಯ ಪರೀಕ್ಷಾ ಸೌಲಭ್ಯಗಳು, ಉಚಿತ ಮೂತ್ರಪಿಂಡ ಶುದ್ಧೀಕರಣ (ಡಯಾಲಿಸಿಸ್) ಸೇವೆ ಹಾಗೂ ಸಂಪೂರ್ಣ ಸುರಕ್ಷತಾ ವ್ಯವಸ್ಥೆಗಳ ಕುರಿತು ವಿವರಿಸಿದರು. ಗ್ರಾಮೀಣ ಭಾಗದ ಜನರು ಸಮೀಪದಲ್ಲೇ ದೊರೆಯುವ ಈ ವೈದ್ಯಕೀಯ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ತಾಲೂಕು ಯೋಜನಾಧಿಕಾರಿ ಯಶೋಧರ ಅವರು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಗ್ರಾಮೀಣ ಜನರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.

ಶಿಬಿರದಲ್ಲಿ ನೇತ್ರ ತಜ್ಞ ಡಾ.ಸುಭಾಷ್, ಕಿವಿ-ಮೂಗು-ಗಂಟಲು ತಜ್ಞ ಡಾ.ರೋಹನ್ ದೀಕ್ಷಿತ್, ಚರ್ಮರೋಗ ತಜ್ಞೆ ಡಾ.ಭವಿಷ್ಯ, ಅಸ್ಥಿ ಮತ್ತು ಮೂಳೆ ತಜ್ಞ ಡಾ.ಪ್ರತೀಕ್ಷ್, ಮಕ್ಕಳ ತಜ್ಞ ಡಾ.ಪ್ರತೀತ್ ಹಾಗೂ ಸಾಮಾನ್ಯ ವೈದ್ಯಕೀಯ ವಿಭಾಗದ ವೈದ್ಯಾಧಿಕಾರಿ ಡಾ. ಪ್ರೌಷ್ಟಿಲ್ ಸೇರಿದಂತೆ ತಜ್ಞ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿತು.

ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂದೀಪ್ ಗೌಡ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮೋಹನ್ ಗೌಡ, ಮುಖ್ಯೋಪಾಧ್ಯಾಯಿನಿ ಸರಸ್ವತಿ, ಜನಜಾಗೃತಿ ವಲಯ ವೇದಿಕೆ ಅಧ್ಯಕ್ಷ ಚನ್ನಪ್ಪ ಗೌಡ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕಿ ಪ್ರಿಯಾ ಸ್ವಾಗತಿಸಿದರು, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ರಶ್ಮಿತಾ ವಂದಿಸಿದರು.

 

Leave a Reply

error: Content is protected !!