






ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ (ಪುತ್ತೂರು ತಾಲೂಕು ಮತ್ತು ಗ್ರಾಮಾಂತರ) ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಇವರ ಜಂಟಿ ಆಶ್ರಯದಲ್ಲಿ, ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪ ಕೇಂದ್ರಗಳ ಸಹಯೋಗದೊಂದಿಗೆ ವಿಶಿಷ್ಟ ಸಾಮೂಹಿಕ ಸರಸ್ವತಿ ವಂದನೆ ಮತ್ತು ವಿದ್ಯಾ ಸಂಕಲ್ಪ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ಕೇಶವಪ್ರಸಾದ್ ಮುಳಿಯ ಹವನದ ಸಂಕಲ್ಪ ನೆರವೇರಿಸಿದರು. ಜಯರಾಮ ಜೋಯಿಸ್ ಮತ್ತು ತಂಡ ಸರಸ್ವತೀ ಸೂಕ್ತ ಹವನವನ್ನು ನಡೆಸಿಕೊಟ್ಟರು.
ದೇವಾಲಯಗಳ ಸಂವರ್ಧನಾ ಸಮಿತಿ ಮಂಗಳೂರು ವಿಭಾಗದ ವಿಭಾಗ ಪ್ರಮುಖ್ ಕೇಶವಪ್ರಸಾದ್ ಮುಳಿಯ ಅವರು ವಿದ್ಯಾರ್ಥಿಗಳಿಗೆ ನೂತನ ಶೈಕ್ಷಣಿಕ ವರ್ಷದ ಪ್ರತಿಜ್ಞಾಪೂರ್ವಕ ವಿದ್ಯಾ ಸಂಕಲ್ಪ ಬೋಧಿಸಿದರು. ಪೂರ್ಣಾಹುತಿ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ, ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ರವೀಂದ್ರನಾಥ್ ರೈ, ರಾಮದಾಸ್ ಗೌಡ, ರಾಧಾಕೃಷ್ಣ ನಂದಿಲ, ಕೃಷ್ಣಕುಮಾರ್ ಅತ್ರಿಜಾಲು, ಸಂಪತ್ ಕುಮಾರ್ ಹಾಗೂ ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಯೋಜಕ ಕೃಷ್ಣವೇಣಿ ಪ್ರಸಾದ್ ಮುಳಿಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಧಾರ್ಮಿಕ ಶಿಕ್ಷಣ ಕೇಂದ್ರಗಳ ಬೋಧಕರಾದ ವಿ.ಪ್ರಭಾವತಿ, ಸುಧಾ ಹೆಬ್ಬಾರ್, ಚಂದ್ರಪ್ರಭಾ, ಶಂಕರಿ ಶರ್ಮ, ವಿಜಯ ಸರಸ್ವತಿ, ಸುಮಂಗಲ, ಕವಿತಾ ಕೊಳತ್ತಾಯ, ವತ್ಸಲ ರಾಜ್ಞಿ, ವೀಣಾ ಬಿ.ಕೆ., ತೇಜಸ್ವಿ ಹಾಗೂ ಪ್ರಶಾಂತ್ ದೊಡ್ಡಡ್ಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ನಿತ್ಯ ಕರಸೇವಕರ ಅಧ್ಯಕ್ಷ ವಾದಿರಾಜ್ ಹಾಗೂ ತಂಡದ ಸದಸ್ಯರು ಸಹ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ 175 ವಿದ್ಯಾರ್ಥಿಗಳು ಭಕ್ತಿಪೂರ್ವಕ ಭಜನೆಯೊಂದಿಗೆ ಸರಸ್ವತಿ ಅಷ್ಟೋತ್ತರ ಪಠಿಸಿ, ತಮ್ಮ ಪುಸ್ತಕಗಳಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಮಂಜುಳಗಿರಿ ವೆಂಕಟರಮಣ ಭಟ್ ಅವರು ಮಕ್ಕಳಿಗೆ ಸರಸ್ವತಿ ಅಷ್ಟೋತ್ತರ ಹಾಗೂ ವಿವಿಧ ಶ್ಲೋಕಗಳನ್ನು ಬೋಧಿಸಿದರು. ವಿದ್ಯಾರ್ಥಿಗಳ ಜೊತೆಗೆ ಪೋಷಕರು, ಬೋಧಕರು ಮತ್ತು ಭಕ್ತಾದಿಗಳು ಸೇರಿ ಸುಮಾರು 275 ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಜನಾ ಸೇವೆಯಲ್ಲಿ ತೊಡಗಿದರು.
ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಆಸಕ್ತಿ, ಸಂಸ್ಕಾರ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ದೇವರ ಆಶೀರ್ವಾದದೊಂದಿಗೆ ಪ್ರಸಾದ, ಪುಸ್ತಕ ಹಾಗೂ ಶ್ರೀ ದೇವರ ನಾಮ ಮುದ್ರಿತ ಪೆನ್ಗಳನ್ನು ವಿತರಿಸಲಾಯಿತು.
ಅಧಿಕಮಾಸದ ಪವಿತ್ರ ಸಂದರ್ಭದಲ್ಲಿ ನಡೆದ ಈ ಸಾಮೂಹಿಕ ಸರಸ್ವತಿ ವಂದನೆ ಕಾರ್ಯಕ್ರಮವು ವಿದ್ಯೆ, ಭಕ್ತಿ ಮತ್ತು ಸಂಸ್ಕಾರದ ಸಂಗಮವಾಗಿ ಯಶಸ್ವಿಯಾಗಿ ನೆರವೇರಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಪ್ರೇರಣೆಯಾಯಿತು.
ಪ್ರಸ್ತುತ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು, ಶ್ರೀ ಮುಂಡ್ಯತ್ತಾಯ ದೈವಸ್ಥಾನ ಪಾಂಗಳಾಯಿ, ಮುಳಿಯ ದೇವರಕಟ್ಟೆ (ಕೋರ್ಟ್ ರಸ್ತೆ), ಅಟಲ್ ಉದ್ಯಾನ ಕೊಂಬೆಟ್ಟು, ಮಾಸ್ಟರ್ ಪ್ಲಾನರಿ ಕಲ್ಲೇಗ, ಶ್ರೀ ಷಣ್ಮುಖ ಸುಬ್ರಹ್ಮಣ್ಯ–ಶ್ರೀ ಮಹಾವಿಷ್ಣು ದೇವಸ್ಥಾನ ಕೆಮ್ಮಿಂಜೆ ಹಾಗೂ ಶ್ರೀ ರಾಘವೇಂದ್ರ ಮಠ ಕಲ್ಲಾರೆ ಕೇಂದ್ರಗಳಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ತರಗತಿಗಳು ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಹಿಂದೂ ಧಾರ್ಮಿಕ ಶಿಕ್ಷಣ ಕಚೇರಿ ದೂರವಾಣಿ ಸಂಖ್ಯೆ 90358 88916 ಅನ್ನು ಸಂಪರ್ಕಿಸಬಹುದಾಗಿದೆ.


