






ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳ ಪ್ರಾರಂಭೋತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು. ಇದೇ ಸಂದರ್ಭದಲ್ಲಿ ಶಾಲೆಯು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಆಗಿ ಸರ್ಕಾರದಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಸಂಭ್ರಮಾಚರಣೆಯನ್ನೂ ಹಮ್ಮಿಕೊಳ್ಳಲಾಯಿತು.
ಎಲ್‌ಕೆಜಿ ಮತ್ತು ಯುಕೆಜಿ ಪುಟಾಣಿಗಳನ್ನು ಕಾಲೇಜಿನ ದ್ವಾರದಿಂದ ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಶಾಲಾ ಆವರಣಕ್ಕೆ ಕರೆತಂದು ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ರಫೀಕ್ ವಹಿಸಿದ್ದರು.
ಮುಖ್ಯಶಿಕ್ಷಕ ವರ್ಗೀಸ್ ಮಾತನಾಡಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಕೆ. ಇಸ್ಮಾಯಿಲ್ ಕೋಲ್ಪೆ, ಎಸ್‌ಡಿಎಂಸಿ ಅಧ್ಯಕ್ಷ ಮಹಮ್ಮದ್ ರಫೀಕ್ ಹಾಗೂ ಊರಿನ ಪ್ರಮುಖರು ಸಚಿವರು, ಶಿಕ್ಷಣ ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡಿ ಸತತ ಪ್ರಯತ್ನ ನಡೆಸಿದ ಪರಿಣಾಮ 2026-27ನೇ ಶೈಕ್ಷಣಿಕ ಸಾಲಿನಿಂದ ಕೊಣಾಲು ಶಾಲೆಗೆ ಕೆಪಿಎಸ್ ಮಾನ್ಯತೆ ದೊರೆತಿದೆ ಎಂದು ತಿಳಿಸಿದರು. ಕಳೆದ ವರ್ಷ ಆರಂಭಗೊಂಡ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಲ್ಲಿ 70 ಮಕ್ಕಳು ದಾಖಲಾತಿಯಾಗಿದ್ದರೆ, ಈ ವರ್ಷ ಆ ಸಂಖ್ಯೆ 140ಕ್ಕೆ ಏರಿಕೆಯಾಗಿದ್ದು, ಎಲ್ಲರ ಸಹಕಾರದಿಂದ ಮಕ್ಕಳ ಸಂಖ್ಯೆ ದ್ವಿಗುಣಗೊಂಡಿರುವುದು ಸಂತಸದ ವಿಚಾರ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಕೆ. ಇಸ್ಮಾಯಿಲ್ ಕೋಲ್ಪೆ ಮಾತನಾಡಿ, ತಾವು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಶಾಲೆಯಲ್ಲಿ 400ರಿಂದ 500 ಮಕ್ಕಳು ಇದ್ದರು. ನಂತರ ಮೂಲಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿತ್ತು. ಕಳೆದ ಕೆಲವು ವರ್ಷಗಳಿಂದ ಕೆಪಿಎಸ್ ಮಾನ್ಯತೆಗಾಗಿ ನಿರಂತರ ಪ್ರಯತ್ನ ನಡೆಸಲಾಗಿದ್ದು, ಈ ಶೈಕ್ಷಣಿಕ ವರ್ಷದಿಂದ ಸರ್ಕಾರದ ಅನುಮೋದನೆ ದೊರೆತಿದೆ. ಮುಂದಿನ ದಿನಗಳಲ್ಲಿ ಕಟ್ಟಡ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಅಭಿವೃದ್ಧಿಗೊಂಡರೆ ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ ಕೆ.ವಿ., ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಅಬ್ದುಲ್ ಜಬ್ಬಾರ್ ಅಸ್ಲಾಮಿ, ಕೊಣಾಲು ಶಿವಗಿರಿ ಭಜನಾ ಮಂಡಳಿ ಅಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ, ಕೊಣಾಲು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಶಶಿಧರ್, ಕೊಣಾಲು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಿನೇಶ್ ಕುಮಾರ್, ಹಿರಿಯ ವಿದ್ಯಾರ್ಥಿ ಬದ್ರುದ್ದೀನ್ ಅಮಾನ್ ಹಾಗೂ ಕೆ.ಎಸ್. ನಾಸಿರ್ ಸಮರಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಖಾ, ಪಿಟಿಎ ಅಧ್ಯಕ್ಷ ಪ್ರಿಯಾ ಪ್ರಕಾಶ್, ಆಂಗ್ಲಮಾಧ್ಯಮ ಸಮಿತಿ ಉಪಾಧ್ಯಕ್ಷೆ ರೇವತಿ ಸುಂದರ, ನಿವೃತ್ತ ಶಿಕ್ಷಕಿ ಭವಾನಿ ಬಿ.ಎಲ್., ಶಿಕ್ಷಕ ಕಾಂತ ನಾಯಕ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಪ್ರಜಲ ಬಾಬು, ನೇಮಿರಾಜ್ ಕಲಾಯಿ, ನಿತಿನ್ ಕುಮಾರ್ ಪಾಂಡಿಬೆಟ್ಟು, ಸಮೀರ್ ಅರ್ಶದಿ, ಎಸ್.ಕೆ.ರಜಾಕ್, ಪೋಷಕರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



