ನೆಲ್ಯಾಡಿ: ಗೌಡಸಾಗು-ಬರೆಗುಡ್ಡೆ ರಸ್ತೆ ಸಮಸ್ಯೆಗೆ ಸಾರ್ವಜನಿಕರ ಮನವಿಗೆ ಸ್ಪಂದಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪಿಡಿಒ ಪತ್ರ

ಶೇರ್ ಮಾಡಿ

 

ನೆಲ್ಯಾಡಿ: ಗೌಡಸಾಗು-ಬರೆಗುಡ್ಡೆ ರಸ್ತೆ ಸಮಸ್ಯೆಗೆ ಸಾರ್ವಜನಿಕರ ಮನವಿಗೆ ಸ್ಪಂದಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪಿಡಿಒ ಪತ್ರ

ನೆಲ್ಯಾಡಿ: ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೌಡಸಾಗು-ಬರೆಗುಡ್ಡೆ ಸಂಪರ್ಕ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ–75ಕ್ಕೆ ಸಮರ್ಪಕವಾಗಿ ಜೋಡಿಸುವಂತೆ ಸಾರ್ವಜನಿಕರು ಸಲ್ಲಿಸಿದ್ದ ಮನವಿಗೆ ಗ್ರಾಮ ಪಂಚಾಯತ್ ಆಡಳಿತ ಸ್ಪಂದಿಸಿದ್ದು, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದಾರೆ.

ಗೌಡಸಾಗು-ಬರೆಗುಡ್ಡೆ ಪ್ರದೇಶದ ನಾಗರಿಕರು ಸಲ್ಲಿಸಿದ ಮನವಿಯಲ್ಲಿ, ಈ ರಸ್ತೆಯು ನೂರಾರು ಜನರು ಪ್ರತಿನಿತ್ಯ ಬಳಸುವ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ರಾಷ್ಟ್ರೀಯ ಹೆದ್ದಾರಿ–75ರ ಅಗಲೀಕರಣದ ಬಳಿಕ ಹೆದ್ದಾರಿಯ ಮಟ್ಟ ಎತ್ತರವಾಗಿರುವ ಕಾರಣ ಸಂಪರ್ಕ ರಸ್ತೆ ತಗ್ಗು ಪ್ರದೇಶದಲ್ಲಿ ಉಳಿದಿದೆ. ಇದರಿಂದ ಹೆದ್ದಾರಿಗೆ ವಾಹನಗಳನ್ನು ಸಂಪರ್ಕಿಸುವ ವೇಳೆ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಇತರ ಹಲವು ಜಿಲ್ಲಾ ಹಾಗೂ ಪಂಚಾಯತ್ ರಸ್ತೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಸಂಪರ್ಕ ಕಲ್ಪಿಸಿರುವಂತೆ ಗೌಡಸಾಗು-ಬರೆಗುಡ್ಡೆ ರಸ್ತೆಯನ್ನೂ ಹೆದ್ದಾರಿಗೆ ಸಮರ್ಪಕವಾಗಿ ಜೋಡಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಾರ್ವಜನಿಕರ ಈ ಬೇಡಿಕೆಗೆ ಸ್ಪಂದಿಸಿರುವ ಕೌಕ್ರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದು, ಕೌಕ್ರಾಡಿ ಪೇಟೆಯಿಂದ ಶಾಂತಿಬೆಟ್ಟು-ಗೌಡಸಾಗು, ಬರೆಗುಡ್ಡೆ ಹಾಗೂ ಹೊಸಮಜಲು ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಹೆದ್ದಾರಿಯೊಂದಿಗೆ ಸೂಕ್ತ ಜಂಕ್ಷನ್ ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಗಮನ ಸೆಳೆದಿದ್ದಾರೆ.

ಮನೆಗಳಿಗೆ ಅಗತ್ಯ ವಸ್ತುಗಳನ್ನು ಸಾಗಿಸಲು, ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಹಾಗೂ ಸಾರ್ವಜನಿಕರು ದಿನನಿತ್ಯದ ಕೆಲಸಗಳಿಗೆ ಪೇಟೆಗೆ ಸಂಚರಿಸಲು ಸಾಕಷ್ಟು ತೊಂದರೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಂಕ್ಷನ್ ರಸ್ತೆ ಪಟ್ಟಿಯಲ್ಲಿ ಈ ರಸ್ತೆಗಳನ್ನು ಪರಿಗಣಿಸದೆ ಬಿಟ್ಟಿರುವ ಹಿನ್ನೆಲೆಯಲ್ಲಿ, ತುರ್ತಾಗಿ ಕಾಂಕ್ರೀಟ್ ಸಂಪರ್ಕ ರಸ್ತೆ ನಿರ್ಮಿಸಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಪಿಡಿಒ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಾರ್ವಜನಿಕರ ಬೇಡಿಕೆಗೆ ಗ್ರಾಮ ಪಂಚಾಯತ್ ಬೆಂಬಲ ಸೂಚಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು ಗೌಡಸಾಗು-ಬರೆಗುಡ್ಡೆ ಭಾಗದ ಜನರ ಬಹುಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.

 

Leave a Reply

error: Content is protected !!