







ನೆಲ್ಯಾಡಿ: ರಾಜ್ಯದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳು ಆರಂಭವಾಗಿದ್ದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಸರ್ಕಾರ ಘೋಷಿಸಿರುವ ಉಚಿತ ಬಸ್ ಪಾಸ್ ಯೋಜನೆಯ ಅರ್ಜಿ ಪ್ರಕ್ರಿಯೆ ಜೂನ್ 12ರಿಂದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಆರಂಭಗೊಂಡಿದೆ. ಆದರೆ ಆರಂಭದ ದಿನಗಳಿಂದಲೇ ಸರ್ವರ್ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಸೈಬರ್ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾದು ಕುಳಿತು ಕೊನೆಗೆ ನಿರಾಸೆಯಿಂದ ಹಿಂದಿರುಗುವ ಪರಿಸ್ಥಿತಿ ಎದುರಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ವಿದ್ಯಾರ್ಥಿಗಳು ತಮ್ಮ ಮೊಬೈಲ್, ಸೈಬರ್ ಸೆಂಟರ್, ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ನಾಡಕಚೇರಿಗಳ ಮೂಲಕ ಸೇವಾ ಸಿಂಧು ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಯೋಜನೆ ಜಾರಿಗೆ ಬಂದ ಬೆನ್ನಲ್ಲೇ ತಾಂತ್ರಿಕ ದೋಷಗಳು ಅರ್ಜಿ ಪ್ರಕ್ರಿಯೆಗೆ ಅಡ್ಡಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ.
ಬೆಳಗ್ಗೆಯೇ ಅಗತ್ಯ ದಾಖಲೆಗಳೊಂದಿಗೆ ಸೈಬರ್ ಕೇಂದ್ರಗಳಿಗೆ ಆಗಮಿಸುವ ವಿದ್ಯಾರ್ಥಿಗಳು ಹಲವು ಗಂಟೆಗಳ ಕಾಲ ಕಾಯುತ್ತಿದ್ದರೂ ವೆಬ್‌ಸೈಟ್ ತೆರೆಯದ ಕಾರಣ ಅರ್ಜಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ಒಂದಕ್ಕಿಂತ ಹೆಚ್ಚು ಬಾರಿ ಕೇಂದ್ರಗಳಿಗೆ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗದೆ ಸಮಯ ಹಾಗೂ ಹಣ ಎರಡನ್ನೂ ಕಳೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗಗಳಿಂದ ದೂರದ ಊರುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಇನ್ನಷ್ಟು ಸಂಕಷ್ಟವನ್ನುಂಟು ಮಾಡಿದೆ.
ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಉಚಿತ ಪಾಸ್ ದೊರೆಯುವವರೆಗೆ ತಮ್ಮ ಸ್ವಂತ ಖರ್ಚಿನಲ್ಲಿ ಬಸ್ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈಗಾಗಲೇ ಶಿಕ್ಷಣ ವೆಚ್ಚದಿಂದ ಸಂಕಷ್ಟದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರತಿದಿನದ ಬಸ್ ದರ ಹೆಚ್ಚುವರಿ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಹಲವಾರು ಪೋಷಕರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಪ್ರಯೋಜನ ಸಮಯಕ್ಕೆ ದೊರೆಯದಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದರ ಜೊತೆಗೆ ಸೈಬರ್ ಕೇಂದ್ರಗಳಲ್ಲಿಯೂ ಭಾರೀ ಜನಸಂದಣಿ ಉಂಟಾಗಿದೆ. ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತರೂ ಸರ್ವರ್ ಸ್ಪಂದಿಸದ ಕಾರಣ ಅರ್ಜಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ಅಸಮಾಧಾನವನ್ನು ಸೈಬರ್ ಕೇಂದ್ರದ ಸಿಬ್ಬಂದಿಯೇ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಡೆ ಒಂದು ದಿನದಲ್ಲಿ ಕೆಲವೇ ಅರ್ಜಿಗಳನ್ನು ಮಾತ್ರ ಸಲ್ಲಿಸಲು ಸಾಧ್ಯವಾಗಿದ್ದು, ಉಳಿದವರು ಮತ್ತೆ ಬರುವಂತೆ ಸೂಚಿಸಲಾಗುತ್ತಿದೆ.
ಸೇವಾ ಸಿಂಧು ಪೋರ್ಟಲ್‌ನಲ್ಲಿ ಲಾಗಿನ್ ಸಮಸ್ಯೆ, ಓಟಿಪಿ ವಿಳಂಬ, ದಾಖಲೆ ಅಪ್‌ಲೋಡ್ ಆಗದಿರುವುದು ಹಾಗೂ ಅರ್ಜಿ ಸಲ್ಲಿಕೆಯ ಕೊನೆಯ ಹಂತದಲ್ಲಿ ಸಿಸ್ಟಂ ಸ್ಥಗಿತಗೊಳ್ಳುವಂತಹ ತಾಂತ್ರಿಕ ತೊಂದರೆಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದು ಬಳಕೆದಾರರು ಆರೋಪಿಸಿದ್ದಾರೆ. ಇದರಿಂದ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳದೆ ಪುನಃ ಆರಂಭಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರು ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸುವುದು, ತಾಂತ್ರಿಕ ದೋಷಗಳನ್ನು ಶಾಶ್ವತವಾಗಿ ಸರಿಪಡಿಸುವುದು ಹಾಗೂ ಅರ್ಜಿ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ಒತ್ತಾಯಿಸಿದ್ದಾರೆ. ಯೋಜನೆಯ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಾಗಿದ್ದು, ತಾಂತ್ರಿಕ ವೈಫಲ್ಯದಿಂದ ಅದರ ಪ್ರಯೋಜನ ವಿಳಂಬವಾಗದಂತೆ ಶೀಘ್ರ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಉಚಿತ ಬಸ್ ಪಾಸ್ ಸೌಲಭ್ಯ ಸಿಗಲಿದೆ ಎಂಬ ನಿರೀಕ್ಷೆಯಿಂದ ಅರ್ಜಿ ಸಲ್ಲಿಸಲು ಬಂದಿದ್ದೇವೆ. ಆದರೆ ಗಂಟೆಗಳಿಗೂ ಹೆಚ್ಚು ಕಾಲ ಕಾಯುತ್ತಿದ್ದರೂ ವೆಬ್‌ಸೈಟ್ ತೆರೆಯುತ್ತಿಲ್ಲ. ಕಾಲೇಜಿಗೆ ಹೋಗಲು ಪ್ರತಿದಿನ ಬಸ್ ದರವನ್ನು ನಮ್ಮ ಜೇಬಿನಿಂದಲೇ ಪಾವತಿಸಬೇಕಾಗಿದೆ. ಸರ್ಕಾರ ತಕ್ಷಣ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
— ಆಯುಷ್ ಪಿ., ವಿದ್ಯಾರ್ಥಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ
ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ಸರ್ವರ್ ಕಾರ್ಯನಿರ್ವಹಿಸದ ಕಾರಣ ಒಂದು ಅರ್ಜಿಯನ್ನೂ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕೆಲವರು ನಮ್ಮಿಂದಲೇ ಕೆಲಸ ವಿಳಂಬವಾಗುತ್ತಿದೆ ಎಂದು ಭಾವಿಸಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ತಾಂತ್ರಿಕ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಷ್ಕರಿಸಬೇಕು.
— ವಿಶ್ವನಾಥ .ಎನ್., ಮ್ಯಾಟ್ರಿಕ್ಸ್ ಗ್ರಾಮ ಒನ್ ಕೌಕ್ರಾಡಿ-ನೆಲ್ಯಾಡಿ



