ನೆಲ್ಯಾಡಿ: ಪಿಎಂ ಶ್ರೀ ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬ: ‘ಲಯನ್’ ತಂಡಕ್ಕೆ ಭರ್ಜರಿ ಜಯ

ಶೇರ್ ಮಾಡಿ

 

ನೆಲ್ಯಾಡಿ: ಪಿಎಂ ಶ್ರೀ ಶಾಲೆಯಲ್ಲಿ ಪ್ರಜಾಪ್ರಭುತ್ವದ ಹಬ್ಬ: ‘ಲಯನ್’ ತಂಡಕ್ಕೆ ಭರ್ಜರಿ ಜಯ

ನೆಲ್ಯಾಡಿ: ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ನೆಲ್ಯಾಡಿಯ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತು ಚುನಾವಣೆಯನ್ನು ಸಂಸದೀಯ ಮಾದರಿಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯು ವಿದ್ಯಾರ್ಥಿಗಳಲ್ಲಿ ಅಪಾರ ಉತ್ಸಾಹ ಮೂಡಿಸಿತು. ‘ಲಯನ್’ ಮತ್ತು ‘ಶಾರ್ಕ್’ ಎಂಬ ಎರಡು ತಂಡಗಳು ಚುನಾವಣಾ ಕಣಕ್ಕಿಳಿದು ವಿವಿಧ ಮಂತ್ರಿ ಸ್ಥಾನಗಳಿಗೆ ಸ್ಪರ್ಧಿಸಿದ್ದವು. ಶಾಲೆಯ ಸ್ವಚ್ಛತೆ, ಶೈಕ್ಷಣಿಕ ಗುಣಮಟ್ಟ, ಕ್ರೀಡಾ ಚಟುವಟಿಕೆಗಳ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡ ಪ್ರಣಾಳಿಕೆಗಳನ್ನು ಪ್ರಕಟಿಸಿ ಅಭ್ಯರ್ಥಿಗಳು ಮತಯಾಚನೆ ನಡೆಸಿದ್ದರು.

ಚುನಾವಣಾ ದಿನ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು. ಮತಪೆಟ್ಟಿಗೆಯ ಮುಂದೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಳಿಕ ನಡೆದ ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿದ್ದು, ಫಲಿತಾಂಶದಲ್ಲಿ ‘ಲಯನ್’ ತಂಡವು 14ರಲ್ಲಿ ಬಹುತೇಕ ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿತು. ಬಹುಮತ ಪಡೆದ ‘ಲಯನ್’ ತಂಡದ ನಾಯಕಿ ಶಾಲಾ ಮುಖ್ಯಮಂತ್ರಿಯಾಗಿ ಜೆನಿಶ ಡಿಸೋಜ, ಉಪಮುಖ್ಯಮಂತ್ರಿಯಾಗಿ ಫಾತಿಮ ಮಿನ್ಶಾ ಹಾಗೂ ಜೀವೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಶಿಕ್ಷಣ ಮಂತ್ರಿಯಾಗಿ ಹಿಮಾನಿ ಜಿ.ಕೆ., ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ಇಶಾಮ್,ಆರೋಗ್ಯ ಮಂತ್ರಿಯಾಗಿ ಎಲಿನ ಬೆನ್ಸಿ ಜೋಸೆಫ್,ಪರಿಸರ ಮಂತ್ರಿಯಾಗಿ ಎ.ಆರುಷ್, ಗೃಹ ಮಂತ್ರಿಯಾಗಿ ಸಂಪ್ರಿತ್, ನೈರ್ಮಲ್ಯ ಮಂತ್ರಿಯಾಗಿ ಮಹಮ್ಮದ್ ಅಮೀನುಲ್ಲ, ಗ್ರಂಥಾಲಯ ಮಂತ್ರಿಯಾಗಿ ಅಫ್ರಾ ಫಾತಿಮ, ನೀರಾವರಿ ಮಂತ್ರಿಯಾಗಿ ಸಾನ್ವಿತ್ ಶೆಟ್ಟಿ, ಆಹಾರ ಮಂತ್ರಿಯಾಗಿ ಧನ್ವಿ, ಸುದ್ದಿ ಮತ್ತು ಪ್ರಸಾರಾಂಗ ಮಂತ್ರಿಯಾಗಿ ಆರ್ಯಶ್ರೀ ಪಿ. ನಾಯರ್, ತೋಟಗಾರಿಕಾ ಮಂತ್ರಿಯಾಗಿ ಪ್ರಿನ್ಸನ್ ಡಿಸೋಜ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯಶಿಕ್ಷಕ ಶ್ರೀಧರ್ ವಿದ್ಯಾರ್ಥಿಗಳು ಬಾಲ್ಯದಲ್ಲೇ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತುಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು. ಚುನಾವಣೆ ಎಂಬುದು ಕೇವಲ ಮತದಾನ ಪ್ರಕ್ರಿಯೆಯಲ್ಲ, ಅದು ನಾಯಕತ್ವ, ಶಿಸ್ತು ಮತ್ತು ಹೊಣೆಗಾರಿಕೆಯನ್ನು ಕಲಿಸುವ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು ಶಾಲೆಯ ವಿವಿಧ ಚಟುವಟಿಕೆಗಳಿಗೆ ನಾಯಕತ್ವ ವಹಿಸಿಕೊಂಡು ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

 

Leave a Reply

error: Content is protected !!