







ನೆಲ್ಯಾಡಿ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಇಲ್ಲಿನ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ 2025-26ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಸಂಸದೀಯ ಮಾದರಿಯಲ್ಲಿ ನಡೆಯಿತು.
ಈ ಬಾರಿಯ ಚುನಾವಣೆಯ ವಿಶೇಷತೆಯಾಗಿ ಇಲೆಕ್ಟ್ರಾನಿಕ್ ಮತದಾನ ಯಂತ್ರ ಹಾಗೂ ಪ್ರಾಜೆಕ್ಟರ್ ಬಳಸಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯಗಳನ್ನು ನಡೆಸಿದ ಬಳಿಕ ವಿದ್ಯಾರ್ಥಿಗಳು ಮತದಾನ ಹಕ್ಕು ಚಲಾಯಿಸಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.
ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ, ನೆಲ್ಯಾಡಿಯ ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್ ಅವರು ಮತದಾನ ಯಂತ್ರವನ್ನು ವಿನ್ಯಾಸಗೊಳಿಸಿ, ವಿದ್ಯಾರ್ಥಿಗಳಿಗೆ ಇವಿಎಂ ಕಾರ್ಯವೈಖರಿ ಹಾಗೂ ಮತದಾನದ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಚುನಾವಣಾ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಿದರು.
ಮತದಾನ ಮುಕ್ತಾಯಗೊಂಡ ಬಳಿಕ ಎಲ್ಲಾ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮತ ಎಣಿಕೆ ನಡೆಸಲಾಯಿತು. ಸಂಸ್ಥೆಯ ಸಹ ಸಂಚಾಲಕರಾದ ಡೀಕನ್ ಜಾರ್ಜ್ ಹಾಗೂ ಮುಖ್ಯಶಿಕ್ಷಕ ಪ್ರಕಾಶ್ ಅವರು ಮತ ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಿ ಪಾರದರ್ಶಕ ಚುನಾವಣೆಯ ಮಹತ್ವವನ್ನು ವಿವರಿಸಿದರು.
ಚುನಾವಣೆಯಲ್ಲಿ ಶಾಲಾ ನಾಯಕನಾಗಿ ವರುಣ್ ಎಂ.ಡಿ., ಉಪನಾಯಕಿಯಾಗಿ ಶ್ರೇಯಾ ಎಂ.ಜೆ., ಸಾಂಸ್ಕೃತಿಕ ಮಂತ್ರಿಯಾಗಿ ಸೃಷ್ಠಿ ಪಿ.ಎಸ್., ಉಪಮಂತ್ರಿಯಾಗಿ ಜಿನ್ಷಾ, ಕ್ರೀಡಾ ಮಂತ್ರಿಯಾಗಿ ಆಶಿನ್ ಡಿ. ಅನಿಲ್, ಉಪಮಂತ್ರಿಯಾಗಿ ನಿಶಾಂತ್, ಆರೋಗ್ಯ ಮಂತ್ರಿಯಾಗಿ ಎಲೈಷಾ ಜಿನಿ, ಉಪಮಂತ್ರಿಯಾಗಿ ಅನು ಏಂಜಲ್, ಗ್ರಂಥಾಲಯ ಮಂತ್ರಿಯಾಗಿ ಸೋನಿಕಾ ಗೌಡ, ಉಪಮಂತ್ರಿಯಾಗಿ ಅಭಿಷೇಕ್ ಕೆ.ಆರ್., ವಿದ್ಯಾ ಮಂತ್ರಿಯಾಗಿ ಶ್ರದ್ಧಾ ಕೆ., ಉಪಮಂತ್ರಿಯಾಗಿ ಧನುಷ್, ಸಭಾಪತಿಯಾಗಿ ಶಿಫಾ ಸಂತೋಷ್ ಹಾಗೂ ಸಂಸತ್ ಕಾರ್ಯ ಮೇಲುಸ್ತುವಾರಿ ಮಂತ್ರಿಯಾಗಿ ಮೆರ್ಲಿನ್ ಮನೋಜ್ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಮೇಲುಸ್ತುವಾರಿಯನ್ನು ದೈಹಿಕಶಿಕ್ಷಣ ಶಿಕ್ಷಕ ಜಿಮ್ಸನ್ ವರ್ಗೀಸ್ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶಾಲೆಯ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಸಹಕರಿಸಿದರು.



