ಗೋಳಿತೊಟ್ಟು: 11 ವರ್ಷಗಳ ಹಿಂದಿನ ಹಲ್ಲೆ, ಕೊಲೆಯತ್ನ ಪ್ರಕರಣ: 8 ಆರೋಪಿಗಳಿಗೆ ದೋಷಮುಕ್ತಿ

ಶೇರ್ ಮಾಡಿ

 

ಗೋಳಿತೊಟ್ಟು: ಪುತ್ತೂರು ಸೆಷನ್ಸ್ ನ್ಯಾಯಾಲಯದ ತೀರ್ಪು; ವಿಚಾರಣೆ ವೇಳೆ ಒಬ್ಬ ಆರೋಪಿ ಮೃತ್ಯು, ಮತ್ತೊಬ್ಬನ ವಿರುದ್ಧ ಪ್ರಕರಣ ಪ್ರತ್ಯೇಕ

ಹನ್ನೊಂದು ವರ್ಷಗಳ ಹಿಂದೆ ಗೋಳಿತೊಟ್ಟು ಪೇಟೆಯಲ್ಲಿ ನಡೆದಿದ್ದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಂಟು ಮಂದಿಯನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

2015ರ ನವೆಂಬರ್ 13ರಂದು ಮಧ್ಯಾಹ್ನ ಗೋಳಿತೊಟ್ಟು ನಿವಾಸಿ ಮಹಮ್ಮದ್ ಅಶ್ರಫ್ ಅವರು ತಮ್ಮ ಬೈಕ್‌ನಲ್ಲಿ ಮೊಹಮ್ಮದ್ ಹಾರೀಸ್ ಅವರನ್ನು ಹಿಂಬದಿ ಸವಾರನನ್ನಾಗಿ ಕೂರಿಸಿಕೊಂಡು ಮಸೀದಿಗೆ ತೆರಳಿ ಪ್ರಾರ್ಥನೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಗೋಳಿತೊಟ್ಟು ಪೇಟೆಯಲ್ಲಿ ಈ ಘಟನೆ ನಡೆದಿತ್ತು. ನಾಲ್ಕು ಬೈಕ್‌ಗಳಲ್ಲಿ ಎಂಟು ಮಂದಿ ಹಾಗೂ ಮಾರುತಿ ಓಮ್ನಿ ವಾಹನದಲ್ಲಿ ಬಂದ ಮೂವರು ಸೇರಿ ಮಹಮ್ಮದ್ ಅಶ್ರಫ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಲ್ಲದೆ, ಅವರನ್ನು ರಕ್ಷಿಸಲು ಮುಂದಾದ ಮೊಹಮ್ಮದ್ ಹಾರೀಸ್ ಅವರ ಮೇಲೆಯೂ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಾಳುಗಳನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಕುರಿತು ಮಹಮ್ಮದ್ ಅಶ್ರಫ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಕಿರಣ್ ಶಿಶಿಲ ಯಾನೆ ಕಿರಣ್, ಪ್ರಸಾದ್ ಪೂಜಾರಿ, ಸಂತೋಷ್, ರೂಪೇಶ್, ಗಣೇಶ ಬಿ., ಮೂಲಚಂದ್ರ ಪ್ರಭು, ಗಣೇಶ ಎಂ., ಜಯಂತ ಎ., ನಿತ್ಯಾನಂದ ಯಾನೆ ನಿತಿನ್ ಹಾಗೂ ಕರುಣಾಕರ ಎ. ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆಯ ಅವಧಿಯಲ್ಲಿ ಎರಡನೇ ಆರೋಪಿ ಪ್ರಸಾದ್ ಪೂಜಾರಿ ಮೃತಪಟ್ಟಿದ್ದರು. ಮೊದಲನೇ ಆರೋಪಿ ಕಿರಣ್ ಶಿಶಿಲ ಯಾನೆ ಕಿರಣ್ ನ್ಯಾಯಾಲಯಕ್ಕೆ ನಿಯಮಿತವಾಗಿ ಹಾಜರಾಗದೇ ಇದ್ದುದರಿಂದ ಆತನ ವಿರುದ್ಧದ ಪ್ರಕರಣವನ್ನು ಪ್ರತ್ಯೇಕಿಸಲಾಗಿತ್ತು. ಉಳಿದ ಎಂಟು ಆರೋಪಿಗಳ ವಿರುದ್ಧ ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಸಾಕ್ಷ್ಯಾಧಾರಗಳ ಪರಿಶೀಲನೆ ಬಳಿಕ ಆರೋಪಿಗಳನ್ನು ದೋಷಮುಕ್ತಗೊಳಿಸಿ ಜೂನ್ 19ರಂದು ತೀರ್ಪು ಪ್ರಕಟಿಸಿದೆ.

ಪ್ರಕರಣದಲ್ಲಿ ಆರು ಮಂದಿ ಆರೋಪಿಗಳ ಪರವಾಗಿ ವಕೀಲ ಚಿನ್ಮಯ್ ರೈ ಈಶ್ವರಮಂಗಲ ವಾದ ಮಂಡಿಸಿದ್ದರೆ, ಆರೋಪಿಗಳಾದ ಮೂಲಚಂದ್ರ ಪ್ರಭು ಹಾಗೂ ಜಯಂತ ಎ. ಅವರ ಪರವಾಗಿ ವಕೀಲ ಮಾಧವ ಪೂಜಾರಿ ವಾದಿಸಿದ್ದರು.

 

Leave a Reply

error: Content is protected !!