ಕಡಬ: ಜ್ಞಾನ ವಿಕಾಸ ಕೇಂದ್ರಗಳ ಬಲವರ್ಧನೆಗೆ ಕ್ರಿಯಾಯೋಜನೆ ಸಭೆ

ಶೇರ್ ಮಾಡಿ

 

ಕಡಬ: ಜ್ಞಾನ ವಿಕಾಸ ಕೇಂದ್ರಗಳ ಬಲವರ್ಧನೆಗೆ ಕ್ರಿಯಾಯೋಜನೆ ಸಭೆ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ.) ಕಡಬ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮಗಳ ಕ್ರಿಯಾಯೋಜನೆ ಸಭೆಯು ಕಡಬದ ಜಯದುರ್ಗ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ–2 ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯ ಉದ್ದೇಶದಿಂದ ಮಾತೃಶ್ರೀ ಹೇಮಾವತಿ ಅಮ್ಮ ಅವರ ಪರಿಕಲ್ಪನೆಯಲ್ಲಿ 50ರಿಂದ 60 ಸದಸ್ಯರನ್ನು ಒಳಗೊಂಡ ಜ್ಞಾನ ವಿಕಾಸ ಕೇಂದ್ರಗಳನ್ನು ರಚಿಸಲಾಗಿದ್ದು, ಮಹಿಳೆಯರು ಕೌಟುಂಬಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅಗತ್ಯ ಮಾಹಿತಿ, ಮಾರ್ಗದರ್ಶನ ಮತ್ತು ಪ್ರೇರಣೆಯನ್ನು ನೀಡುವ ಮಹತ್ವದ ಕಾರ್ಯಕ್ರಮವೇ ಜ್ಞಾನ ವಿಕಾಸ ಕಾರ್ಯಕ್ರಮ ಎಂದು ಹೇಳಿದರು.

ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಜ್ಞಾನ ವಿಕಾಸ ಕೇಂದ್ರಗಳ ಸಂಯೋಜಕಿಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರು ಉತ್ತಮ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯುವ ಮೂಲಕ ಮಹಿಳಾ ಸಬಲೀಕರಣದ ಕಾರ್ಯಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.

ಉಡುಪಿ ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿಗಳಾದ ಅಮೃತ ಮಾತನಾಡಿ, ಜ್ಞಾನ ವಿಕಾಸ ಕೇಂದ್ರಗಳು ಸದಸ್ಯರ ಭಾವನೆಗಳಿಗೆ ಸ್ಪಂದಿಸುವ ವೇದಿಕೆಯಾಗಬೇಕು. ಮಹಿಳೆಯರು ತಮ್ಮ ಕಷ್ಟ-ನೋವುಗಳನ್ನು ಹಂಚಿಕೊಳ್ಳಲು, ಹೊಸ ವಿಚಾರಗಳನ್ನು ಕಲಿಯಲು ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಕೇಂದ್ರಗಳು ಸಹಕಾರಿಯಾಗಬೇಕು ಎಂದು ತಿಳಿಸಿದರು. ಮಾತೃಶ್ರೀ ಹೇಮಾವತಿ ಅಮ್ಮನವರ ಕಾಳಜಿ, ಚಿಂತನೆ ಮತ್ತು ಕಲ್ಪನೆಯಂತೆ ಕಾರ್ಯನಿರ್ವಹಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು, ಸಂಯೋಜಕಿಯರು ಪ್ರಾಮಾಣಿಕ ಸೇವಾ ಮನೋಭಾವದಿಂದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದರು.

ಮಹಿಳೆಯರು ಸ್ವಾವಲಂಬಿಗಳಾಗಿ ಕುಟುಂಬದ ಆರ್ಥಿಕ ನಿರ್ವಹಣೆಯಲ್ಲಿ ತಮ್ಮದೇ ಆದ ಕೊಡುಗೆ ನೀಡುವಂತಾಗಬೇಕು. ಅದಕ್ಕಾಗಿ ಪೂರಕವಾದ ಉದ್ಯೋಗ, ಕೌಶಲ್ಯ ಮತ್ತು ಸ್ವ-ಉದ್ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಜ್ಞಾನ ವಿಕಾಸ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಹಾಗೂ ವಾತ್ಸಲ್ಯ ಕಾರ್ಯಕ್ರಮಗಳ ಕುರಿತು ವಿವರವಾದ ಮಾರ್ಗದರ್ಶನ ನೀಡಿದರು.

ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದು ಅಗತ್ಯ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಜ್ಞಾನ ವಿಕಾಸ ಸಂಯೋಜಕರಾದ ಭವ್ಯ ಹಾಗೂ ವಿನೋದ್ ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು.

ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನ ಜಿ ಉಪಸ್ಥಿತರಿದ್ದರು. ಜ್ಞಾನ ವಿಕಾಸ ಸಂಯೋಜಕಿ ದುರ್ಗಾವತಿ ಸ್ವಾಗತಿಸಿದರು. ಸಂಯೋಜಕಿ ಸವಿತಾ ವಂದಿಸಿದರು. ತಾಲೂಕಿನ ವಿವಿಧ ಜ್ಞಾನ ವಿಕಾಸ ಕೇಂದ್ರಗಳ ಸಂಯೋಜಕಿಯರು ಸಭೆಯಲ್ಲಿ ಭಾಗವಹಿಸಿದ್ದರು.

 

Leave a Reply

error: Content is protected !!