









ಅರಸಿನಮಕ್ಕಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರದಂದು ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗ್ರಾಮವನ್ನು ಸ್ವಚ್ಛ ಹಾಗೂ ಆರೋಗ್ಯಕರವಾಗಿಡುವ ಉದ್ದೇಶದಿಂದ ಆಯೋಜಿಸಲಾದ ಈ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಆಡಳಿತಾಧಿಕಾರಿ ಭರತ್ ಎ., ಮಾಜಿ ಪಂಚಾಯತ್ ಅಧ್ಯಕ್ಷ ಸುಧೀರ್ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗ, ಗ್ರಂಥಾಲಯ ಮೇಲ್ವಿಚಾರಕರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು.
ಕಾರ್ಯಕ್ರಮದ ಅಂಗವಾಗಿ ಪಂಚಾಯತ್ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಯ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಡೆದ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನೆರವೇರಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ ಮಾತನಾಡಿ, ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗ್ರಾಮವನ್ನು ಸ್ವಚ್ಛವಾಗಿಡಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು. ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲಾ ಇಲಾಖೆ ಸಿಬ್ಬಂದಿ, ಕಾರ್ಯಕರ್ತೆಯರು, ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರಿಗೆ ಅವರು ಧನ್ಯವಾದ ಸಲ್ಲಿಸಿದರು.
ಆಡಳಿತಾಧಿಕಾರಿ ಭರತ್ ಎ. ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.



