ಕೊಕ್ಕಡ: ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ಪಾಲಕರ ಹಬ್ಬ ಆಚರಣೆ

ಶೇರ್ ಮಾಡಿ

 

ಕೊಕ್ಕಡ: ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ವಿಜೃಂಭಣೆಯಿಂದ ಪಾಲಕರ ಹಬ್ಬ ಆಚರಣೆ

ಕೊಕ್ಕಡ: ಕೌಕ್ರಾಡಿ ಸಂತ ಜಾನ್ ಬ್ಯಾಪ್ಟಿಸ್ಟ್ ದೇವಾಲಯದಲ್ಲಿ ಪಾಲಕರ ಹಬ್ಬವನ್ನು ಬುಧವಾರ ದಂದು ಅತ್ಯಂತ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಜೇಮ್ಸ್ ಪಟ್ಟೇರಿಲ್ ಆಗಮಿಸಿದ್ದು, ದೇವಾಲಯದ ಧರ್ಮಗುರುಗಳು ಹಾಗೂ ಪಾಲನ ಸಮಿತಿಯ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿಯವರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ಸಂಜೆ 6 ಗಂಟೆಗೆ ಪುತ್ತೂರಿನ ಮಾಯಿದೆ ದೇವಸ್ ದೇವಾಲಯದ ಧರ್ಮಗುರುಗಳಾದ ಡಾ. ಜೆ.ಬಿ. ಸಲ್ಡಾನ ಅವರ ನೇತೃತ್ವದಲ್ಲಿ ವಿಶೇಷ ದಿವ್ಯ ಬಲಿಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕೊಕ್ಕಡ ದೇವಾಲಯದ ವಿಚಾರಣ ಗುರುಗಳಾದ ವಂ.ಅನಿಲ್ ಪ್ರಕಾಶ್ ಡಿಸಿಲ್ವಾ, ಸೇವಾದರ್ಶಿ ವಿಲ್ಫ್ರೆಡ್ ರೊಡ್ರಿಗಸ್, ಪುತ್ತೂರು ವಲಯದ ಧರ್ಮಗುರುಗಳು, ನೆಲ್ಯಾಡಿ ಹಾಗೂ ಕೊಕ್ಕಡ ದೇವಾಲಯಗಳ ಗುರುಗಳು ಮತ್ತು ಧರ್ಮಭಗಿನಿಯರು ಉಪಸ್ಥಿತರಿದ್ದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ಕಳೆದ ಅವಧಿಯಲ್ಲಿ ಚರ್ಚ್ ಪಾಲನ ಸಮಿತಿಯಲ್ಲಿ ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಗುರಿಕಾರರಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು. ಇದೇ ವೇಳೆ ಮುಖ್ಯ ಅತಿಥಿಗಳಾದ ಧರ್ಮಾಧ್ಯಕ್ಷ ಜೇಮ್ಸ್ ಪಟ್ಟೇರಿಲ್ ಹಾಗೂ ಅತೀವಂದನೀಯ ಡಾ. ಜೆ.ಬಿ. ಸಲ್ಡಾನ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಬಳಿಕ ಸಭೆಯನ್ನುದ್ದೇಶಿಸಿ ಜೇಮ್ಸ್ ಪಟ್ಟೇರಿಲ್ ಅವರು ಮಾತನಾಡಿ ಸಂತ ಸ್ನಾನಿಕ ಯೋವನ್ನರ ಜೀವನ, ತ್ಯಾಗ, ದೇವಭಕ್ತಿ ಹಾಗೂ ದೇವರ ಮೇಲಿನ ಅವರ ಅಚಲ ನಂಬಿಕೆಯ ಕುರಿತು ಪ್ರೇರಣಾದಾಯಕ ಸಂದೇಶ ನೀಡಿದರು. ದೇವಾಲಯದ ವಿಚಾರಣ ಗುರುಗಳಾದ ವಂ.ಅನಿಲ್ ಪ್ರಕಾಶ್ ಡಿಸಿಲ್ವಾ ಪ್ರಸ್ತಾವಿಕವಾಗಿ ಮಾತನಾಡಿದರು.

ಪಾಲನ ಸಮಿತಿಯ ಉಪಾಧ್ಯಕ್ಷೆ ಶಾಂತಿ ಡಿಸೋಜ ಸ್ವಾಗತಿಸಿದರು, ಕಾರ್ಯದರ್ಶಿ ಲವೀನಾ ಡಿಸೋಜ ವಂದಿಸಿದರು. ವಿನ್ಸೆಂಟ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ಪಾಲನ ಸಮಿತಿಯ ಸದಸ್ಯರು, ಭಕ್ತಾದಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಅತಿಥಿಗಳು ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು.

 

Leave a Reply

error: Content is protected !!