ದೇವರ ಮೇಲಿನ ಭಕ್ತಿ, ಪರಿಶ್ರಮ ಮತ್ತು ಶಿಕ್ಷಕರ ಗೌರವವೇ ಯಶಸ್ಸಿನ ಗುಟ್ಟು – ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೊಬ್ ಎಸ್. ಕೊಯ್ಯೂರು











ನೆಲ್ಯಾಡಿ: ದೇವರ ಮೇಲಿನ ಅಚಲ ಭಕ್ತಿ, ನಿರಂತರ ಪರಿಶ್ರಮ, ಗುರಿಯತ್ತ ದೃಢ ಸಂಕಲ್ಪ ಹಾಗೂ ಶಿಕ್ಷಕರ ಮೇಲಿನ ಗೌರವವೇ ಯಶಸ್ಸಿನ ನಿಜವಾದ ಗುಟ್ಟು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೊಬ್ ಎಸ್. ಕೊಯ್ಯೂರು ಅಭಿಪ್ರಾಯಪಟ್ಟರು.

ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಗಳ 49ನೇ ಸ್ಥಾಪನಾ ದಿನಾಚರಣೆ ಹಾಗೂ ಸುಮಾರು ₹7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಗಣಿತ ಪ್ರಯೋಗಾಲಯವನ್ನು ಮಂಗಳವಾರ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆ ಮಾಡಲು ಬಯಸುವವರಿಗೆ ಅನೇಕ ಮಾರ್ಗಗಳಿವೆ. ಆದರೆ ಗುರಿ, ಪರಿಶ್ರಮ ಹಾಗೂ ದೇವರ ಮೇಲಿನ ಭಕ್ತಿಯೇ ಯಶಸ್ಸಿನ ಮೂಲಮಂತ್ರ. ಯಾವುದೇ ಸ್ವಾರ್ಥವಿಲ್ಲದೆ ದೇವರ ಅನುಗ್ರಹದಿಂದ 49 ವರ್ಷಗಳ ಹಿಂದೆ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಹೆಮ್ಮೆಯ ಸಂಸ್ಥೆಯಾಗಿ ಬೆಳೆದಿರುವುದು ಶ್ಲಾಘನೀಯ ಸಾಧನೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪ್ರತಿದಿನ ದೇವರನ್ನು ಪ್ರಾರ್ಥಿಸುವ ಮೂಲಕ ಜೀವನದಲ್ಲಿ ಸಾಧನೆಗೆ ಅಗತ್ಯವಾದ ಮಾನಸಿಕ ಶಕ್ತಿಯನ್ನು ಗಳಿಸಬೇಕು. ಬೆಳಿಗ್ಗೆ ಐದು ಗಂಟೆಯೊಳಗೆ ಎದ್ದು ಅಭ್ಯಾಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ತಂದೆ-ತಾಯಿಯನ್ನು ಗೌರವಿಸಬೇಕು. ತಾಯಿಯ ಮಡಿಲಲ್ಲಿ ಶಾಂತಿ, ತಂದೆಯಲ್ಲಿ ತ್ಯಾಗ ಹಾಗೂ ಗುರುವಿನಲ್ಲಿ ಶಕ್ತಿ ಅಡಗಿದೆ. ಶಿಕ್ಷಕ ವೃತ್ತಿಯೇ ಜಗತ್ತಿನ ಶ್ರೇಷ್ಠ ವೃತ್ತಿಯಾಗಿದ್ದು, ಒಬ್ಬ ಶಿಕ್ಷಕನ ತಪ್ಪು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಿವಿಮಾತು ಹೇಳಿದರು.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಶಿಕ್ಷಕರನ್ನು ಮುಂಚೂಣಿಯಲ್ಲಿ ಕೂರಿಸಿ ಗೌರವಿಸಿದ ಏಕೈಕ ವ್ಯಕ್ತಿಯಾಗಿದ್ದರು ಎಂಬುದನ್ನು ಸ್ಮರಿಸಿದ ಯಾಕೊಬ್ ಎಸ್. ಕೊಯ್ಯೂರು, ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಆರಂಭಗೊಂಡಿರುವ ಈ ಅತ್ಯಾಧುನಿಕ ಗಣಿತ ಪ್ರಯೋಗಾಲಯವು ಇಲ್ಲಿನ ವಿದ್ಯಾರ್ಥಿಗಳಷ್ಟೇ ಅಲ್ಲದೆ ಸುತ್ತಮುತ್ತಲಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೂ ಜ್ಞಾನ ವೃದ್ಧಿಗೆ ನೆರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಮಾತನಾಡಿ, ಛಲ, ಆತ್ಮವಿಶ್ವಾಸ ಹಾಗೂ ದೇವರ ಅನುಗ್ರಹದಿಂದಲೇ ಶೂನ್ಯದಿಂದ ಆರಂಭಗೊಂಡ ಈ ಶಿಕ್ಷಣ ಸಂಸ್ಥೆ ಇಂದು ಉನ್ನತ ಮಟ್ಟಕ್ಕೆ ಬೆಳೆದಿದೆ. ಸಂಸ್ಥೆಯ ಆರಂಭದ ದಿನಗಳಲ್ಲಿ ಬಿಷಪ್ ಅವರ “ಪ್ರಾರ್ಥಿಸು – ಪ್ರಕಾಶಿಸು – ಪರಿಶ್ರಮಿಸು” ಎಂಬ ಧ್ಯೇಯವಾಕ್ಯವೇ ಸಂಸ್ಥೆಯ ಬೆಳವಣಿಗೆಗೆ ದಿಕ್ಸೂಚಿಯಾಗಿದೆ ಎಂದು ಹೇಳಿದರು. ಹಳ್ಳಿಯಿಂದ ಬಂದ ವಿದ್ಯಾರ್ಥಿಗಳು ಯಾವುದೇ ಕೀಳರಿಮೆ ಹೊಂದದೆ ಆತ್ಮವಿಶ್ವಾಸದಿಂದ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಇದಕ್ಕೂ ಮುನ್ನ ಸಂಸ್ಥೆಯ ಸಂಚಾಲಕ ರೆ.ಫಾ. ನೋಮಿಸ್ ಪಿ. ಕುರಿಯಾಕೋಸ್ ಅವರ ನೇತೃತ್ವದಲ್ಲಿ ಕೃತಜ್ಞತಾ ದಿವ್ಯ ಬಲಿಪೂಜೆ ನಡೆಯಿತು. ಬಳಿಕ ವಿದ್ಯಾರ್ಥಿಗಳ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ರೆ.ಫಾ.ಪಿ.ಕೆ. ಅಬ್ರಹಾಂ ಕೋರ್ ಎಪಿಸ್ಕೋಪ, ಬೆಂಗಳೂರು ಟೆಸ್ಕಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ರಿಯಾಜ್ ಎಡಪ್ಪಾಯಿಲ್, ವಿದ್ಯಾಸಂಸ್ಥೆಯ ಕೋಶಾಧಿಕಾರಿ ಪಿ.ಪಿ.ವರ್ಗೀಸ್, ಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಪಿ. ಕುರಿಯಾಕೋಸ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳಿ ಎಚ್., ಕಾಲೇಜಿನ ಪ್ರಾಚಾರ್ಯ ಏಲಿಯಸ್ ಎಂ.ಕೆ., ಮುಖ್ಯಶಿಕ್ಷಕ ಎಂ.ಐ. ತೋಮಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ–ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಸಂಸ್ಥೆಯ ನಿವೃತ್ತ ಶಿಕ್ಷಕರಾದ ವಿ.ಆರ್. ಹೆಗ್ಡೆ ಹಾಗೂ ಉಲಹನ್ನನ್ ಪಿ.ಎಂ., ಪೂರ್ವ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಇಸ್ಮಾಯಿಲ್ ನೋಟರಿ ವಕೀಲರು, ಕಾಲೇಜಿನ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ, ಪೂರ್ವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ. ಸ್ವಾಗತಿಸಿದರು. ಉಪನ್ಯಾಸಕ ಚೇತನ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಶಿಕ್ಷಕ ಎಂ.ಐ. ತೋಮಸ್ ವಂದಿಸಿದರು.



