ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಸತ್ ಚಟುವಟಿಕೆಗಳಿಗೆ ಚಾಲನೆ – ಶಿಕ್ಷಕರಿಗೆ ಭಾವಪೂರ್ಣ ಬೀಳ್ಕೊಡುಗೆ

ಶೇರ್ ಮಾಡಿ

 

ನೆಲ್ಯಾಡಿ: ಸಂತ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಕಾಲೇಜಿನ ಸಂಸತ್ತಿನ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಶುಭಾರಂಭ ಹಾಗೂ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್. ಕೊಯ್ಯೂರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಸಂಸತ್ತು ಎನ್ನುವುದು ಕೇವಲ ಹುದ್ದೆಗಳ ವ್ಯವಸ್ಥೆಯಲ್ಲ. ಅದು ನಾಯಕತ್ವ, ಜವಾಬ್ದಾರಿ, ಶಿಸ್ತು ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂದಿನ ವಿದ್ಯಾರ್ಥಿ ನಾಯಕರೇ ನಾಳಿನ ಸಮಾಜದ ನಾಯಕರಾಗಲಿದ್ದು, ಪ್ರಾಮಾಣಿಕತೆ ಮತ್ತು ಮೌಲ್ಯಾಧಾರಿತ ನಾಯಕತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ನಾಯಕತ್ವದ ಬ್ಯಾಚ್ ತೊಡಿಸಿ ಅಭಿನಂದಿಸಿದರು. ಬಳಿಕ ಸ್ವಯಂ ನಿವೃತ್ತಿ ಪಡೆದ ಆಂಗ್ಲ ಮಾಧ್ಯಮದ ಮುಖ್ಯಶಿಕ್ಷಕ ಹರಿಪ್ರಸಾದ್, ಬೇರೆ ಸಂಸ್ಥೆಗೆ ಉದ್ಯೋಗಕ್ಕೆ ತೆರಳಿದ ಶಿಕ್ಷಕ ಕರುಣಾಕರ್ ಹಾಗೂ ಕಚೇರಿ ಸಿಬ್ಬಂದಿ ಸಿಜು ಅವರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದ ಅವರು ಒಬ್ಬ ಉತ್ತಮ ಶಿಕ್ಷಕ ತನ್ನ ಸೇವೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿನಲ್ಲಿ ಅಳಿಸಲಾಗದ ಗುರುತು ಮೂಡಿಸುತ್ತಾನೆ. ಸಂಸ್ಥೆಯ ಬೆಳವಣಿಗೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರು ಮತ್ತು ಸಿಬ್ಬಂದಿಯ ಕೊಡುಗೆ ಸದಾ ಸ್ಮರಣೀಯ. ವಿದ್ಯಾರ್ಥಿಗಳು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಆದರ್ಶ ನಾಗರಿಕರಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ರೆ.ಫಾ.ಪಿ.ಕೆ. ಅಬ್ರಹಾಂ ಕೋರ್ ಎಪಿಸ್ಕೋಪ, ಬೆಂಗಳೂರು ಟೆಸ್ಕಾಂ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ರಿಯಾಜ್ ಎಡಪ್ಪಾಯಿಲ್, ಆಡಳಿತ ಮಂಡಳಿಯ ಕೋಶಾಧಿಕಾರಿ ಪಿ.ಪಿ.ವರ್ಗೀಸ್, ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಪಿ. ಕುರಿಯಾಕೋಸ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳಿ ಎಚ್., ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ., ಕನ್ನಡ ಮಾಧ್ಯಮದ ಮುಖ್ಯಶಿಕ್ಷಕ ಎಂ.ಐ.ತೋಮಸ್ ಹಾಗೂ ವಿದ್ಯಾರ್ಥಿ ಸಂಸತ್ತಿನ ನಾಯಕರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ. ಅವರು ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿ ನಾಯಕಿ ರಿಜಾನ ಶೈಕ್ಷಣಿಕ ವರದಿಯನ್ನು ವಾಚಿಸಿದರು.

ಉಪನ್ಯಾಸಕ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಚೇತನ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕ ಎಂ.ಐ.ತೋಮಸ್ ವಂದಿಸಿದರು.

ಕಾರ್ಯಕ್ರಮದಲ್ಲಿ ನೆಲ್ಯಾಡಿ–ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್., ಸಂಸ್ಥೆಯ ನಿವೃತ್ತ ಶಿಕ್ಷಕರಾದ ವಿ.ಆರ್. ಹೆಗ್ಡೆ ಹಾಗೂ ಉಲಹನ್ನನ್ ಪಿ.ಎಂ., ಪೂರ್ವ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಇಸ್ಮಾಯಿಲ್ ನೋಟರಿ ವಕೀಲರು, ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Leave a Reply

error: Content is protected !!