ಬಿಳಿನೆಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಡಿಜಿ ಪೇ’ ಸೇವೆಗೆ ಚಾಲನೆ

ಶೇರ್ ಮಾಡಿ

 

ಬಿಳಿನೆಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಡಿಜಿ ಪೇ' ಸೇವೆಗೆ ಚಾಲನೆ

ಕಡಬ: ಗ್ರಾಮೀಣ ಪ್ರದೇಶದ ಜನತೆಗೆ ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ವತಿಯಿಂದ ಕಡಬ ತಾಲೂಕಿನ ಬಿಳಿನೆಲೆ ವಲಯದ ಬಂಟ್ರಾ–ನೆಕ್ಕಿಲಾಡಿ ಕಾರ್ಯಕ್ಷೇತ್ರದಲ್ಲಿ ‘ಡಿಜಿ ಪೇ (Digi Pay)’ ಸೇವೆಗೆ ಅಧಿಕೃತ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಹಾಗೂ ಬ್ಯಾಂಕಿಂಗ್ ಸೇವೆಗಳಿಂದ ವಂಚಿತರಾಗಿರುವ ಪ್ರದೇಶಗಳಲ್ಲಿ ಜನರಿಗೆ ಸುಲಭವಾಗಿ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪರಮಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರತಿ ಹಳ್ಳಿ-ಹಳ್ಳಿಗೂ ಡಿಜಿ ಪೇ ಸೇವೆಯನ್ನು ವಿಸ್ತರಿಸುತ್ತಿದೆ. ಈ ಸೇವೆಯ ಮೂಲಕ ಹಣ ಪಡೆಯುವುದು, ಬ್ಯಾಂಕ್ ಖಾತೆಯ ವ್ಯವಹಾರ ನಡೆಸುವುದು ಸೇರಿದಂತೆ ವಿವಿಧ ಬ್ಯಾಂಕಿಂಗ್ ಸೌಲಭ್ಯಗಳು ಜನರ ಮನೆ ಬಾಗಿಲಲ್ಲೇ ಲಭ್ಯವಾಗಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಯಾಂಕ್ ಆಫ್ ಬರೋಡಾ, ಮರ್ಧಾಳ ಶಾಖೆಯ ವ್ಯವಸ್ಥಾಪಕ ರಾಮ್ ಅವರು ಡಿಜಿ ಪೇ ಸೇವೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಮಾತನಾಡಿದ ಅವರು, ಡಿಜಿ ಪೇ ಅತ್ಯಂತ ಉಪಯುಕ್ತ ಹಾಗೂ ಜನಸ್ನೇಹಿ ಕಾರ್ಯಕ್ರಮವಾಗಿದ್ದು, ಬ್ಯಾಂಕಿನ ವಿವಿಧ ಸೇವೆಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಮೂಲಕ ಬ್ಯಾಂಕ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸದಸ್ಯರ ಎಟಿಎಂ ಕಾರ್ಡ್ ಬಳಸಿ ಹಣವನ್ನು ಯಶಸ್ವಿಯಾಗಿ ವಿತ್‌ಡ್ರಾ ಮಾಡುವ ಮೂಲಕ ಡಿಜಿ ಪೇ ಸೇವೆಗೆ ಅಧಿಕೃತ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಒಕ್ಕೂಟದ ಅಧ್ಯಕ್ಷ ಸತೀಶ್ಚಂದ್ರ, ವಲಯ ಮೇಲ್ವಿಚಾರಕ ರವಿಪ್ರಸಾದ್, ತಾಲೂಕು ನೋಡೆಲ್ ಅಧಿಕಾರಿ ರಕ್ಷಕ್, ಜಿಲ್ಲಾ ಐಟಿ ಮ್ಯಾನೇಜರ್ ಶ್ರೇಯಸ್, ಕೃಷಿ ಮೇಲ್ವಿಚಾರಕ ಸೋಮೇಶ್, ಹಣಕಾಸು ಪ್ರಬಂಧಕಿ ಸುಜಾತ, ವಿಎಲ್‌ಇ ಭಾರತಿ, ವಲಯದ ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

Leave a Reply

error: Content is protected !!