










ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) (ರಿ.) ಕಡಬ ತಾಲೂಕಿನ ನೆಲ್ಯಾಡಿ ವಲಯದ ಕೌಕ್ರಾಡಿ ಸೇವಾ ಕೇಂದ್ರದಲ್ಲಿ ಡಿಜಿ ಪೇ ಸೇವೆಗೆ ಸೋಮವಾರ ದಂದು ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಕಡಬ ತಾಲೂಕಿನ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಉದ್ಘಾಟಿಸಿ ಮಾತನಾಡಿ ವಾರದ ಹಣ ಸಂಗ್ರಹಣೆಯ ದಿನದಂದು ಸದಸ್ಯರು ತಮ್ಮ ಆಧಾರ್ ಕಾರ್ಡ್ ಅಥವಾ ಎಟಿಎಂ ಕಾರ್ಡ್ ಬಳಸಿ ಸುಲಭವಾಗಿ ಹಣ ಪಡೆಯುವ ವ್ಯವಸ್ಥೆ ಈಗ ಲಭ್ಯವಿದ್ದು, ಇದರಿಂದ ಬ್ಯಾಂಕ್ಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಲಿದೆ. ಈ ಸೇವೆಯ ಸೌಲಭ್ಯವನ್ನು ಪ್ರತಿಯೊಬ್ಬ ಸದಸ್ಯರೂ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೌಕ್ರಾಡಿ ಕಾರ್ಯಕ್ಷೇತ್ರದ ಅಧ್ಯಕ್ಷ ಬಾಲಕೃಷ್ಣ ಗೌಡ ವಹಿಸಿ ಡಿಜಿ ಪೇ ಸೇವೆಯು ಗ್ರಾಮೀಣ ಜನರ ಆರ್ಥಿಕ ವ್ಯವಹಾರಗಳನ್ನು ಮತ್ತಷ್ಟು ಸುಲಭಗೊಳಿಸಲಿದ್ದು, ಯೋಜನೆಯ ಸದಸ್ಯರಿಗೆ ಇದು ಅತ್ಯಂತ ಉಪಯುಕ್ತ ಸೇವೆಯಾಗಲಿದೆ ಎಂದು ಶುಭ ಹಾರೈಸಿದರು.
ಕಡಬ ತಾಲೂಕಿನ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ ಮಾತನಾಡಿ ಇನ್ನು ಮುಂದೆ ಸಣ್ಣಪುಟ್ಟ ಹಣಕಾಸಿನ ವ್ಯವಹಾರಗಳಿಗಾಗಿ ಬ್ಯಾಂಕ್ಗೆ ತೆರಳುವ ಅಗತ್ಯವಿಲ್ಲ. ಡಿಜಿ ಪೇ ಮೂಲಕ ಸದಸ್ಯರು ತಮ್ಮ ಊರಿನಲ್ಲೇ ಸುಲಭವಾಗಿ ಹಣ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರವಿಚಂದ್ರ ಹೊಸವೊಕ್ಲು, ನೆಲ್ಯಾಡಿ ವಲಯದ ಜನಜಾಗೃತಿ ವೇದಿಕೆಯ ಸದಸ್ಯರಾದ ತುಕಾರಾಮ ರೈ ಹೊಸಮನೆ, ಗೀ ವರ್ಗಿಸ್, ಒಕ್ಕೂಟದ ಅಧ್ಯಕ್ಷರಾದ ಸೆಬಾಸ್ಟಿಯನ್ ಪಿ.ಜೆ., ಮಾರ್ಸೆಲ್ ಡಿ’ಸೋಜ, ನೆಲ್ಯಾಡಿ ವಲಯದ ಭಜನಾ ಪರಿಷತ್ ಅಧ್ಯಕ್ಷೆ ಸುಪ್ರಿತಾ ರವಿಚಂದ್ರ ಹೊಸವೊಕ್ಲು, ಕಡಬ ತಾಲೂಕಿನ ನೋಡೆಲ್ ಅಧಿಕಾರಿ ರಕ್ಷಕ್, ಸೇವಾಪ್ರತಿನಿಧಿಗಳಾದ ಸುಮನಾ, ಮೋಹಿನಿ, ಸಿಎಸ್ಸಿ ಸೇವಾದಾರರಾದ ಅಶ್ವಿನಿ, ಸುವಿಧಾ, ಸಹಾಯಕಿ ಹೇಮಾ ವಿ. ಹಾಗೂ ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ನಮಿತಾ ಎಸ್. ಶೆಟ್ಟಿ ಸ್ವಾಗತಿಸಿದರು. ನೆಲ್ಯಾಡಿ ವಲಯದ ಮೇಲ್ವಿಚಾರಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.



