










ಕೊಕ್ಕಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಧರ್ಮಸ್ಥಳದ ಜನಜಾಗೃತಿ ಪ್ರಾದೇಶಿಕ ವಿಭಾಗ, ಬೆಳ್ತಂಗಡಿ ವತಿಯಿಂದ ರೆಖ್ಯ ಗ್ರಾಮದಲ್ಲಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಗಿಡಗಳ ಪೋಷಣೆ ಹಾಗೂ ಗಿಡ ನಾಟಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ್ ಪೂಜ್ಯ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಕಳೆದ ನಾಲ್ಕು ದಶಕಗಳಿಂದ ಪರಿಸರ ಸಂರಕ್ಷಣೆಗಾಗಿ ನೀರಿಂಗಿಸುವಿಕೆ, ಜಲಾನಯನ ಕಾಮಗಾರಿಗಳು, ಕಿಂಡಿ ಅಣೆಕಟ್ಟು ನಿರ್ಮಾಣ, ಗಿಡಮರಗಳ ಬೆಳವಣಿಗೆ, ಸ್ವಚ್ಛತಾ ಅಭಿಯಾನ ಹಾಗೂ ಪಶ್ಚಿಮ ಘಟ್ಟ ಸಂರಕ್ಷಣೆಯಂತಹ ವಿವಿಧ ಪರಿಸರ ಪೂರಕ ಕಾರ್ಯಕ್ರಮಗಳನ್ನು ಯೋಜನೆ ನಿರಂತರವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.
2021ರಲ್ಲಿ ಆರಂಭಗೊಂಡ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಜನಜಾಗೃತಿ ಪ್ರಾದೇಶಿಕ ವಿಭಾಗದ ಮೂಲಕ ರಾಜ್ಯಾದ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ. ಇದುವರೆಗೆ ರಾಜ್ಯದಲ್ಲಿ 1,811 ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, 1,351 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 2,16,450 ಗಿಡಗಳನ್ನು ನೆಡಲಾಗಿದೆ. ಅರಣ್ಯ ಇಲಾಖೆಯ ಸಹಯೋಗದಲ್ಲಿ ‘ಶೌರ್ಯ’ ವಿಪತ್ತು ನಿರ್ವಹಣಾ ಸ್ವಯಂಸೇವಕರ ಮೂಲಕ ವನಮಹೋತ್ಸವ, ಜಲಾನಯನ ಕಾರ್ಯಕ್ರಮ, ಕೆರೆಗಳ ಸುತ್ತಮುತ್ತ ಗಿಡ ನಾಟಿ, ಗಿಡಬಳ್ಳಿಗಳ ಸಂರಕ್ಷಣೆ, ಖಾಲಿ ಜಾಗಗಳಲ್ಲಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಗಿಡ ನೆಡುವುದು, ಸಾಲುಮರಗಳ ಅಭಿವೃದ್ಧಿ, ದೇವರಕಾಡು ಹಾಗೂ ನದಿತೀರಗಳಲ್ಲಿ ಗಿಡ ನೆಡುವ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಉಪ್ಪಿನಂಗಡಿ ವಲಯದ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಮಾತನಾಡಿ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಗಿಡ ನೆಡುವುದಕ್ಕೆ ಮಾತ್ರ ಸೀಮಿತರಾಗದೆ, ಅವುಗಳ ಸಮರ್ಪಕ ಪೋಷಣೆಯಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು. ಶೌರ್ಯ ಘಟಕದ ಸದಸ್ಯ ಚೇತನ್ ಅವರು ಐದು ವರ್ಷಗಳ ಹಿಂದೆ ನೆಟ್ಟ ಸುಮಾರು 150 ಗಿಡಗಳನ್ನು ಇಂದಿಗೂ ಜೋಪಾನವಾಗಿ ಬೆಳೆಸಿಕೊಂಡು ಬಂದಿದ್ದು, ಈ ಬಾರಿ ಗಿಡಗಳ ಬುಡ ಸ್ವಚ್ಛಗೊಳಿಸಿ, ಗೊಬ್ಬರ ಹಾಕಿ, ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸಿರುವುದು ಇತರರಿಗೂ ಮಾದರಿಯಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಇಂತಹ ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕರು ವಿವೇಕ್.ವಿ ಪ್ಯಾಸ್. ಮಾತನಾಡಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ರಾಜ್ಯದಾದ್ಯಂತ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಹಣ್ಣು-ಹಂಪಲುಗಳ ಗಿಡಗಳನ್ನು ಹೆಚ್ಚಾಗಿ ನೆಡುವ ಮೂಲಕ ಜೀವವೈವಿಧ್ಯ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ತಾಲೂಕು ಕೃಷಿ ಮೇಲ್ವಿಚಾರಕರು ರೈತರ ಜಮೀನು ಹಾಗೂ ಸಾರ್ವಜನಿಕ ಸ್ಥಳಗಳ ಮಾಹಿತಿ ಸಂಗ್ರಹಿಸಿ, ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ನರ್ಸರಿಗಳಿಂದ ಗಿಡಗಳನ್ನು ಪಡೆದು ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ವಿತರಣೆ ಹಾಗೂ ನಾಟಿ ಕಾರ್ಯ ನಡೆಸುತ್ತಿದ್ದಾರೆ. ರಾಜ್ಯದ 91 ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶೌರ್ಯ’ ವಿಪತ್ತು ನಿರ್ವಹಣಾ ತಂಡದ 10,470 ಸ್ವಯಂಸೇವಕರು ಗಿಡ ನಾಟಿ, ಬೇಲಿ ನಿರ್ಮಾಣ, ಗಿಡಗಳ ಪೋಷಣೆ ಹಾಗೂ ಬೀಜ ಬಿತ್ತನೆ ಕಾರ್ಯಗಳಲ್ಲಿ ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಐದು ವರ್ಷಗಳ ಹಿಂದೆ ನೆಟ್ಟಿದ್ದ 150 ಗಿಡಗಳ ಸಂರಕ್ಷಣೆ, ಬುಡ ಸ್ವಚ್ಛಗೊಳಿಸುವುದು, ಗೊಬ್ಬರ ಹಾಕುವುದು ಹಾಗೂ ಕಳೆ ಗಿಡಗಳನ್ನು ತೆರವುಗೊಳಿಸುವ ಕೆಲಸಗಳ ಜೊತೆಗೆ, ಕಾಡು ಪ್ರಾಣಿ ಹಾಗೂ ಪಕ್ಷಿಗಳಿಗೆ ಆಹಾರವಾಗುವ ವಿವಿಧ ಹಣ್ಣು-ಹಂಪಲುಗಳ ಹೊಸ ಗಿಡಗಳನ್ನು ಅರಣ್ಯದ ಅಂಚಿನಲ್ಲಿ ನೆಡಲಾಯಿತು.
ಕಾರ್ಯಕ್ರಮದಲ್ಲಿ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ನ ನಿರ್ದೇಶಕ ಕೃಷ್ಣಪ್ಪ, ಬೇಬಿ ಕಿರಣ್, ದನಂಜಯ ಶಿಬರಾಜೆ, ಗ್ರಾಮದ ಹಿರಿಯ ಆನಂದ ಗೌಡ, ಒಕ್ಕೂಟದ ಅಧ್ಯಕ್ಷ ರವೀಂದ್ರ, ಮೇಲ್ವಿಚಾರಕಿ ಪ್ರಿಯಾ, ಬೆಳ್ತಂಗಡಿ ವಿಪತ್ತು ನಿರ್ವಹಣಾ ಸಮಿತಿಯ ಮಾಸ್ಟರ್ ಅವಿನಾಶ್ ಭಿಡೆ, ಘಟಕದ ಸಂಯೋಜಕಿ ರಶ್ಮಿತಾ, ಘಟಕ ಪ್ರತಿನಿಧಿ ಆನಂದ್, ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.



