










ನೆಲ್ಯಾಡಿ: ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪುತ್ತೂರು ಪ್ರಾಥಮಿಕ ಭೂ ಅಭಿವೃದ್ಧಿ (ಪಿ.ಎಲ್.ಡಿ.) ಬ್ಯಾಂಕ್ ವತಿಯಿಂದ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ನೇರ್ಲದಲ್ಲಿ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಸಹಕಾರಿ ವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಸಂತ ಬಿಜೇರು ವಹಿಸಿ ಶಾಲಾ ಆವರಣದಲ್ಲಿ ನೆಡಲಾದ ಪ್ರತಿಯೊಂದು ಗಿಡವೂ ಮುಂದಿನ ಪೀಳಿಗೆಗೆ ಪರಿಸರದ ಮಹತ್ವವನ್ನು ಸಾರುವ ಜೀವಂತ ಸಂದೇಶವಾಗಬೇಕು. ವಿದ್ಯಾರ್ಥಿಗಳು ಗಿಡಗಳನ್ನು ತಮ್ಮ ಮನೆಯ ಸದಸ್ಯರಂತೆ ಪೋಷಿಸಿ ಬೆಳೆಸಿದರೆ ಪರಿಸರ ಸಂರಕ್ಷಣೆಯ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೂ ಇದು ಸಹಕಾರಿಯಾಗಲಿದೆ. ಸಹಕಾರಿ ಸಂಸ್ಥೆಗಳು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಶಿಕ್ಷಣ, ಪರಿಸರ ಹಾಗೂ ಸಾಮಾಜಿಕ ಜವಾಬ್ದಾರಿಗಳಲ್ಲಿಯೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್. ಗೌಡ ಇಚ್ಲಂಪಾಡಿ ಮಾತನಾಡಿ, ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ಆಶಯದಂತೆ ಸಹಕಾರದ ಮೌಲ್ಯಗಳನ್ನು ಸಮಾಜದ ಪ್ರತಿಯೊಂದು ಹಂತಕ್ಕೂ ತಲುಪಿಸುವ ಉದ್ದೇಶದಿಂದ ಸಹಕಾರಿ ವಾರವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಪರಿಸರ ಸಂರಕ್ಷಣೆ ಇಂದಿನ ಅಗತ್ಯವಾಗಿದ್ದು, ಶಾಲಾ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಹಕಾರಿ ಸಂಸ್ಥೆಗಳು ರೈತರು ಹಾಗೂ ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ಸದಾ ಬದ್ಧವಾಗಿದ್ದು, ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಸೇವೆಗಳಲ್ಲಿಯೂ ತಮ್ಮ ಕೊಡುಗೆಯನ್ನು ಮುಂದುವರಿಸಲಿವೆ ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಪ್ರಗತಿಪರ ಕೃಷಿಕ ಹಾಗೂ ಬ್ಯಾಂಕಿನ ಸದಸ್ಯ ಕೈಪ ಕೇಶವ ಭಂಡಾರಿ ಅವರು ಕೃಷಿ ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ತಮ್ಮ ಹಲವು ವರ್ಷಗಳ ಕೃಷಿ ಅನುಭವವನ್ನು ಹಂಚಿಕೊಂಡ ಅವರು, ಆಧುನಿಕ ಕೃಷಿ ಪದ್ಧತಿಗಳು, ಹಣ್ಣಿನ ತೋಟಗಳ ನಿರ್ವಹಣೆ, ಮಣ್ಣಿನ ಫಲವತ್ತತೆ ಕಾಪಾಡುವ ವಿಧಾನಗಳು ಹಾಗೂ ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಪ್ರವೀಣ್ ರೈ ಪಂಜೊಟ್ಟು, ನಿರ್ದೇಶಕರಾದ ವಿಕ್ರಂ ರೈ ಸಾಂತ್ಯ, ಕುಶಾಲಪ್ಪ ಗೌಡ ಅನಿಲ, ರಾಜುಮೋನ್, ಬಾಬು ಮುಗೇರ, ಕಸ್ಕಾರ್ಡ್ ಬ್ಯಾಂಕ್ ಬೆಂಗಳೂರು ಮಂಗಳೂರು ಶಾಖೆಯ ಜಿಲ್ಲಾ ವ್ಯವಸ್ಥಾಪಕ ದಿಲೀಪ್ ಹೆಚ್. ಹೆಚ್., ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಕೈಪ ಕೇಶವ ಭಂಡಾರಿ, ಬ್ಯಾಂಕಿನ ವ್ಯವಸ್ಥಾಪಕಿ ಸುಮನ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಸದಸ್ಯರು, ಸಿಬ್ಬಂದಿ ವರ್ಗದವರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು, ಶಾಲೆಯ ಮುಖ್ಯಶಿಕ್ಷಕ ಡಾ. ಹೆಚ್.ಎಂ. ಗಿರೀಶ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು.
ಶಾಲಾ ಮುಖ್ಯಶಿಕ್ಷಕ ಡಾ. ಹೆಚ್.ಎಂ.ಗಿರೀಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಬ್ಯಾಂಕಿನ ಲೆಕ್ಕಾಧಿಕಾರಿ ವಿನಯ ಕುಮಾರ್ ಕೆ. ವಂದಿಸಿದರು.



