










ಕೊಕ್ಕಡ: ಬಹುರಾಷ್ಟ್ರೀಯ ಕಂಪೆನಿ ಕನ್ಸೇರೋ ಬೆಂಗಳೂರಿನ ಉದ್ಯೋಗಿಗಳು ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಕಾಲಕಾಮ ಪರಶುರಾಮ ದೇವಸ್ಥಾನದ ಸಮೀಪದ ಪರಶುರಾಮ ವನದಲ್ಲಿ ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಪರಿಸರ ಸಂರಕ್ಷಣೆ ಮತ್ತು ಹಸಿರು ವಿಸ್ತರಣೆಯ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 20 ಮಂದಿ ಉದ್ಯೋಗಿಗಳು ಉತ್ಸಾಹದಿಂದ ಭಾಗವಹಿಸಿ, 150ಕ್ಕೂ ಅಧಿಕ ವಿವಿಧ ಜಾತಿಯ ಸಸ್ಯಗಳನ್ನು ನೆಟ್ಟು ಪರಿಸರ ಕಾಳಜಿಯನ್ನು ಮೆರೆದರು.
ಕಾರ್ಯಕ್ರಮಕ್ಕೆ ಕಂಪೆನಿಯ ಉದ್ಯೋಗಿ ಹಾಗೂ ಸ್ಥಳೀಯರಾದ ನವೀನ ದಾಮ್ಲೆ ನೇತೃತ್ವ ವಹಿಸಿದ್ದರು. ಪರಶುರಾಮ ವನದ ರೂವಾರಿ ಗೋವಿಂದ ದಾಮ್ಲೆ ಆಗಮಿಸಿದ ಎಲ್ಲ ಸ್ವಯಂಸೇವಕರನ್ನು ಆತ್ಮೀಯವಾಗಿ ಸ್ವಾಗತಿಸಿ, ವನದ ಅಭಿವೃದ್ಧಿಯ ಕುರಿತು ಮಾರ್ಗದರ್ಶನ ನೀಡಿ ಪರಶುರಾಮ ವನ ನಿರ್ಮಾಣದ ಉದ್ದೇಶ, ಅದರ ಹಿಂದಿನ ಪರಿಕಲ್ಪನೆ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು.
ಕನ್ಸೇರೋ ಕಂಪೆನಿಯ ಉದ್ಯೋಗಿ ಡಾ.ರವಿ ಮಕ್ಕಂ ಮಾತನಾಡಿ ಕಳೆದ ವರ್ಷದಿಂದಲೂ ಪರಶುರಾಮ ವನದಲ್ಲಿ ನಡೆದ ನಿರಂತರ ಶ್ರಮದ ಫಲವಾಗಿ ನೆಟ್ಟಿರುವ ಗಿಡಗಳು ಉತ್ತಮವಾಗಿ ಬೆಳೆದು ಉಳಿದಿರುವುದು ಶ್ಲಾಘನೀಯ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ರಾಶಿವನ, ನಕ್ಷತ್ರ ವನ ಹಾಗೂ ನವಗ್ರಹ ವನಗಳಂತಹ ವಿಶಿಷ್ಟ ಪರಿಕಲ್ಪನೆಗಳನ್ನು ಯಶಸ್ವಿಯಾಗಿ ಸಾಕಾರಗೊಳಿಸಿರುವ ಕಾರ್ಯವನ್ನು ಶ್ಲಾಘಿಸಿ, ಇಂತಹ ಪರಿಸರ ಸ್ನೇಹಿ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ಹೇಳಿದರು.
ಇನ್ನೋರ್ವ ಉದ್ಯೋಗಿ ವಿನಯ್ ಮಯ್ಯ ಮಾತನಾಡಿ ಗೋವಿಂದ ದಾಮ್ಲೆಯವರ ಸ್ವಯಂಸ್ಫೂರ್ತಿ ಮತ್ತು ಪರಿಸರದ ಮೇಲಿನ ಬದ್ಧತೆಯಿಂದ ಇಂದು ಪರಶುರಾಮ ವನವು ಮಾದರಿ ವನವಾಗಿ ರೂಪುಗೊಂಡಿದ್ದು, ಮುಂದಿನ ಪೀಳಿಗೆಗೆ ಅಪರೂಪದ ಸಸ್ಯ ಪ್ರಭೇದಗಳ ಪರಿಚಯವಾಗುವ ಜೀವಂತ ಪ್ರಕೃತಿ ಶಾಲೆಯಾಗಿ ಬೆಳೆದಿದೆ ಎಂದು ಪ್ರಶಂಸಿಸಿದರು.
ವನಮಹೋತ್ಸವದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದ ಬಳಿಕ, ಶಿಶಿಲ ನಾಗನಡ್ಕ ಅರ್ಬಿ ಗುಡ್ಡದಲ್ಲಿ ವಿವಿಧ ಜಾತಿಯ ಅರಣ್ಯ ಸಸ್ಯಗಳ ಬೀಜ ಬಿತ್ತನೆ ಕಾರ್ಯವೂ ನಡೆಯಿತು. ಪರಿಸರ ಸಂರಕ್ಷಣೆ, ಅರಣ್ಯ ವೃದ್ಧಿ ಹಾಗೂ ಜೀವ ವೈವಿಧ್ಯ ಸಂರಕ್ಷಣೆಯ ಸಂದೇಶವನ್ನು ಸಾರಿದ ಈ ಕಾರ್ಯಕ್ರಮದಲ್ಲಿ ಎಲ್ಲ ಸ್ವಯಂಸೇವಕರು ಉತ್ಸಾಹದಿಂದ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ಹಿಮಾಂಶು ಕುಲಕರ್ಣಿ, ಅರವಿಂದ ತುಳುಪುಳೆ, ವೇಣುಗೋಪಾಲ ಗೋಖಲೆ, ಪ್ರಾಣೇಶ ಖರೆ ಹಾಗೂ ಕಾರ್ತಿಕ ದಾಮ್ಲೆ ಉಪಸ್ಥಿತರಿದ್ದು, ವನಮಹೋತ್ಸವ ಯಶಸ್ವಿಗೊಳಿಸಲು ಸಹಕರಿಸಿದರು.



