










ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಅಡೆಂಜದಲ್ಲಿರುವ ಕಟ್ಟಡವೊಂದರಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭಾರತೀಯ ಖೋಟಾ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಿದ್ದ ಜಾಲವನ್ನು ಉಪ್ಪಿನಂಗಡಿ ಪೊಲೀಸರು ಭೇದಿಸಿದ್ದು, ಏಳು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಲಾಗುತ್ತಿದ್ದ ವಿವಿಧ ಉಪಕರಣಗಳು ಹಾಗೂ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ಅವರಿಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ಜುಲೈ 16ರಂದು ಮುಂಜಾನೆ ಸುಮಾರು 1.15 ಗಂಟೆಗೆ ಅಡೆಂಜದಲ್ಲಿರುವ ಕಟ್ಟಡದ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಸ್ಥಳದಲ್ಲಿ ಖೋಟಾ ₹500 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪದಡಿ ಇಬ್ರಾಹಿಂ (60), ಶರೀಪ್ (51), ಸಂದೀಪ್ ಪುಂಡಲಿಕ ಶೋಳಂಬಿ (30), ಮಹಮ್ಮದ್ ನಬಾಸ್ (37), ಸಲ್ಮಾನ್ ಫಾರೀಸ್ (25), ಸಿರಾಜುದ್ದೀನ್ (34) ಹಾಗೂ ಇರ್ಷಾದ್ (31) ಅವರನ್ನು ವಶಕ್ಕೆ ಪಡೆಯಲಾಗಿದೆ.
ದಾಳಿಯ ವೇಳೆ ₹500 ಮುಖಬೆಲೆಯ ಒಂದು ಖೋಟಾ ನೋಟು, ₹500 ಮುಖಬೆಲೆಯ ನೋಟುಗಳಂತೆ ಮುದ್ರಿಸಲಾದ ಎ–4 ಗಾತ್ರದ 21 ಹಾಳೆಗಳು, ಬೆನ್ಕ್ಯೂ ಕಂಪನಿಯ ಮಾನಿಟರ್, ಲ್ಯಾಪ್ಕೇರ್ ಸಿಪಿಯು, ಕೀಬೋರ್ಡ್, ಮೌಸ್, ಕಲರ್ ಝೆರಾಕ್ಸ್–ಪ್ರಿಂಟರ್–ಸ್ಕ್ಯಾನರ್ ಯಂತ್ರ, ಸೆಕ್ಯುರಿಟಿ ಥ್ರೆಡ್ ಮಿಮಿಕ್ ಯಂತ್ರ, ಪೇಪರ್ ಕಟರ್ಗಳು, ಸ್ಕೇಲ್ಗಳು, ಗಾಂಧೀಜಿ ಮುಖಚಿತ್ರದ ಸೀಲ್, ಆರ್ಬಿಐ ಹೆಸರಿನ ಸೆಕ್ಯುರಿಟಿ ಥ್ರೆಡ್ ಹೊಂದಿರುವ ಕಾಗದದ ಬಾಕ್ಸ್ಗಳು, ಭದ್ರತಾ ದಾರವನ್ನು ಹೋಲುವ ಹಸಿರು ಪ್ಲಾಸ್ಟಿಕ್ ರೋಲ್ಗಳು, ಪಿವಿಸಿ ಗ್ಲಾಸ್ ವೈಟ್ ಹಾಗೂ ಹಾರ್ಡನರ್ ಸೇರಿದಂತೆ ಖೋಟಾ ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ವಿವಿಧ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಡೆಂಜದಲ್ಲಿರುವ ಮಹಮ್ಮದ್ ಇದ್ರೀಸ್ ಅವರ ನೂತನ ಕಟ್ಟಡದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ನೆರವಿನಿಂದ ಭಾರತೀಯ ಕರೆನ್ಸಿಯ ಖೋಟಾ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಯಲ್ಲಿ ಚಲಾವಣೆ ಮಾಡುವ ಉದ್ದೇಶದಿಂದ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅದರ ಆಧಾರದ ಮೇಲೆ ದಾಳಿ ನಡೆಸಿ ಜಾಲವನ್ನು ಭೇದಿಸಲಾಗಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದು ಮಣಿ ಆರ್.ಎನ್., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಪೊಲೀಸರಾದ ಯೋಗೀಶ್ ಬಿ., ನಿರಂಜನ್ ಎಂ.ಎನ್., ದಕ್ಷಿಣ ಕನ್ನಡ ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ನಂದಕುಮಾರ್, ಎಎಸ್ಐ ದೀಪಕ್, ಹೆಡ್ ಕಾನ್ಸ್ಟೆಬಲ್ ಸತೀಶ್, ರೌಫ್ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸ್ಐ ದಾಮೋದರ ನಾಯ್ಕ್, ಹೆಡ್ ಕಾನ್ಸ್ಟೆಬಲ್ ನಂಜುಡಯ್ಯ, ಗಜೇಂದ್ರ ನಾಯ್ಕ್ ಮತ್ತು ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



