










ಕೊಕ್ಕಡ: ಕಾಪಿನಬಾಗಿಲು ವ್ಯಾಪ್ತಿಯ ಒಡ್ರಲ್ಕೆ ಹಾಗೂ ಕಾಂಚಿನಡ್ಕ ಪರಿಸರದಲ್ಲಿ ಕಳೆದ ಎರಡು–ಮೂರು ದಿನಗಳಿಂದ ಕಾಡಾನೆ ಹಾಗೂ ಕಾಡುಕೋಣಗಳ ಹಾವಳಿ ಮತ್ತೆ ತೀವ್ರಗೊಂಡಿದ್ದು, ಕೃಷಿಕರಲ್ಲಿ ಆತಂಕ ಮನೆಮಾಡಿದೆ. ಒಂಟಿ ಸಲಗ ನಿರಂತರವಾಗಿ ಕೃಷಿ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶಪಡಿಸುತ್ತಿದ್ದು, ಕಾಡುಕೋಣಗಳ ಹಿಂಡು ಸಹ ತೋಟಗಳಿಗೆ ದಾಳಿ ನಡೆಸಿ ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಉಂಟುಮಾಡುತ್ತಿದೆ.
ಕಾಂಚಿನಡ್ಕದ ಕೃಷಿಕ ಮಹೇಶ್ ಭಟ್ ಅವರಿಗೆ ಸೇರಿದ ತೋಟಕ್ಕೆ ಸೋಮವಾರದಂದು ರಾತ್ರಿ ಒಂಟಿ ಸಲಗ ನುಗ್ಗಿ ದಾಂಧಲೆ ನಡೆಸಿದೆ. ದಾಳಿಯಿಂದ 25ಕ್ಕೂ ಹೆಚ್ಚು ಅಡಿಕೆ ಮರಗಳು, ಒಂದು ದೊಡ್ಡ ತೆಂಗಿನ ಮರ, ಹಲವು ಸಣ್ಣ ತೆಂಗಿನ ಗಿಡಗಳು, ಬಾಳೆ ಬೆಳೆ ಸೇರಿದಂತೆ ವಿವಿಧ ಕೃಷಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಅಲ್ಲದೆ ನೀರಾವರಿ ಪೈಪ್‌ಲೈನ್ ಹಾಗೂ ಸ್ಪ್ರಿಂಕ್ಲರ್ ವ್ಯವಸ್ಥೆಯನ್ನೂ ಪುಡಿಗೈದು ಅಪಾರ ನಷ್ಟ ಉಂಟುಮಾಡಿದೆ.
ಇದರೊಂದಿಗೆ ಕಾಡುಕೋಣಗಳ ಹಿಂಡು ಸಹ ಸತತವಾಗಿ ತೋಟಗಳಿಗೆ ನುಗ್ಗಿ ಅಡಿಕೆ ಗಿಡಗಳನ್ನು ತುಳಿದು ನಾಶಪಡಿಸುತ್ತಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ದಾಳಿಯಿಂದ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಮಾಡಿದ್ದು, ಹಾನಿಯ ವಿವರವನ್ನು ದಾಖಲಿಸಿಕೊಂಡಿದ್ದಾರೆ. ಕಾಡಾನೆ ಸಂಚಾರ ಹೆಚ್ಚಿರುವುದರಿಂದ ಈ ಭಾಗದ ಗ್ರಾಮಸ್ಥರು ಜೀವಭಯದಲ್ಲೇ ದಿನ ಕಳೆಯುವಂತಾಗಿದೆ. ಸಂಜೆ ಬಳಿಕ ಹೊರ ಸಂಚಾರಕ್ಕೂ ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳು, ಕೃಷಿಕರು ಹಾಗೂ ಸಾರ್ವಜನಿಕರು ಆತಂಕದಲ್ಲೇ ಓಡಾಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿರುವ ಆನೆ ಕಂದಕ ಹಲವು ಕಡೆ ತೀವ್ರ ಹಾನಿಗೊಳಗಾಗಿರುವುದರಿಂದ ಕಾಡುಪ್ರಾಣಿಗಳು ಯಾವುದೇ ಅಡೆತಡೆಯಿಲ್ಲದೆ ಕೃಷಿ ಜಮೀನುಗಳಿಗೆ ನುಗ್ಗುತ್ತಿವೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಆನೆ ಕಂದಕವನ್ನು ದುರಸ್ತಿಗೊಳಿಸಿ, ತೂಗುವ ಸೋಲಾರ್ ಬೇಲಿಯನ್ನು ಅಳವಡಿಸುವ ಮೂಲಕ ಕಾಡುಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಜೊತೆಗೆ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಶೀಘ್ರವೇ ಸೂಕ್ತ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಸಂತ್ರಸ್ತ ಕೃಷಿಕರು ಸರ್ಕಾರ ಹಾಗೂ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.



