









ಸುಳ್ಯ: ಕೌಟುಂಬಿಕ ಕಿರುಕುಳದ ಹಿನ್ನೆಲೆ ವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಠಾಣಾ ಪೊಲೀಸರು ಮೃತೆಯ ಮಾವ, ಅತ್ತೆ ಹಾಗೂ ನಾದಿನಿಯನ್ನು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದ (43) ಅವರ ಪುತ್ರಿ ಫಾತಿಮತ್ ನಿಶಾನ್ ಅವರನ್ನು ನಾಲ್ಕು ವರ್ಷಗಳ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಜು.18ರಂದು ರಾತ್ರಿ ಫಾತಿಮತ್ ನಿಶಾನ್ ಅವರು ತಾಯಿಗೆ ಕರೆ ಮಾಡಿ ಮಾತನಾಡುವ ವೇಳೆ, ತನ್ನ ಮಾವ ಅಲವಿ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲಾ ಅವರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಫಾತಿಮತ್ ನಿಶಾನ್ ಅವರಿಂದ ಮೊಬೈಲ್ ಕಸಿದುಕೊಂಡ ಮಾವ ಅಲವಿ ಅವರು, “ನಿನ್ನ ಮಗಳನ್ನು ಕೊಲ್ಲುತ್ತೇನೆ” ಎಂದು ಬೆದರಿಕೆ ಹಾಕಿದ್ದರೆಂದು ತಿಳಿಸಿದ್ದಾರೆ. ಈ ಮಾಹಿತಿ ತಿಳಿದ ಜುಬೈದ ಅವರು ತಕ್ಷಣ ಮಗಳ ಮನೆಗೆ ತೆರಳಿದಾಗ, ಫಾತಿಮತ್ ನಿಶಾನ್ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ತನ್ನ ಮಗಳು ಕೌಟುಂಬಿಕ ಮನಸ್ತಾಪ ಮತ್ತು ನಿರಂತರ ಕಿರುಕುಳದ ಪರಿಣಾಮವಾಗಿ ಕೊಲೆಯಾಗಿದ್ದಾಳೆ ಎಂದು ಜುಬೈದ ಅವರು ನೀಡಿದ ದೂರಿನ ಮೇರೆಗೆ, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವ ಪೊಲೀಸರು, ಜು.22ರಂದು ಆರೋಪಿಗಳಾದ ಮೃತ ಮಹಿಳೆಯ ಮಾವ ಸಿ.ಪಿ. ಅಳವಿ (54), ಅತ್ತೆ ಆಯಿಷಾ ಸಿ.ಎ. ಹಾಗೂ ನಾದಿನಿ ಫಸೀಲಾ ಸಿ.ಎ. (29) ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಳಿಕ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.



