









ಬಂಟ್ವಾಳ: ಶಾಲಾ ಮಕ್ಕಳನ್ನು ಮನೆಗಳಿಗೆ ಬಿಡಲು ತೆರಳುತ್ತಿದ್ದ ವೇಳೆ ಬೃಹತ್ ಮರವೊಂದು ಶಾಲಾ ಬಸ್ ಮೇಲೆ ಉರುಳಿಬಿದ್ದ ಪರಿಣಾಮ 6 ವರ್ಷದ ಬಾಲಕಿ ಸಾವನ್ನಪ್ಪಿ, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ಸಮೀಪ ಬುಧವಾರ ಸಂಜೆ ನಡೆದಿದೆ.
ಮೃತ ಬಾಲಕಿಯನ್ನು ಚಿರನ್ವಿ (6) ಎಂದು ಗುರುತಿಸಲಾಗಿದೆ. ಆಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚಿರನ್ವಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳನ್ನು ಮನೆಗಳಿಗೆ ತಲುಪಿಸಲು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಂಗ್ಲ ಮಾಧ್ಯಮ ವಿಭಾಗದ 24 ಸೀಟರ್ ಪುಟ್ಟ ಬಸ್ ಎಂದಿನಂತೆ ಹೊರಟಿತ್ತು. ಬಸ್ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಮಾಣಿ, ಭರಣಿಕೆರೆ, ಕಲ್ಲೆಟ್ಟಿ ಮಾರ್ಗವಾಗಿ ಪೆರ್ನೆಗೆ ತೆರಳಬೇಕಾಗಿತ್ತು. ಮಾರ್ಗ ಮಧ್ಯೆ ಕೆಲವು ಮಕ್ಕಳನ್ನು ಇಳಿಸಿದ ಬಳಿಕ, ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿನ ಶ್ರೀ ಕಾನಲ್ತಾಯ ದೈವಸ್ಥಾನದ ಸಮೀಪ ಸಾಗುತ್ತಿದ್ದ ವೇಳೆ ರಸ್ತೆಯ ಬದಿಯಲ್ಲಿದ್ದ ಬೃಹತ್ ಮರವೊಂದು ಏಕಾಏಕಿ ಬಸ್ ಮೇಲೆ ಮಗುಚಿಬಿದ್ದಿದೆ.
ಮರ ಬಿದ್ದ ರಭಸಕ್ಕೆ ಬಸ್‌ನ ಮೇಲ್ಭಾಗ ಸಂಪೂರ್ಣ ಜಖಂಗೊಂಡಿದ್ದು, ಗಾಜುಗಳು ಪುಡಿಯಾಗಿವೆ. ಕ್ಷಣಾರ್ಧದಲ್ಲಿ ನಡೆದ ಈ ಅವಘಡದಿಂದ ಬಸ್ಸಿನೊಳಗಿದ್ದ ಮಕ್ಕಳು ಭಯಭೀತರಾಗಿ ಕಿರುಚಾಡಿದರೆ, ಸ್ಥಳದಲ್ಲಿದ್ದವರು ಓಡಿ ಬಂದು ರಕ್ಷಣಾ ಕಾರ್ಯ ಕೈಗೊಂಡರು. ಅಪಘಾತದಲ್ಲಿ ಗಾಯಗೊಂಡ ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು.



