ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ವಿಶೇಷ ಸಭೆ

ಶೇರ್ ಮಾಡಿ

 

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ವಿಶೇಷ ಸಭೆ

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ವಿಶೇಷ ಸಭೆಯು ಕಡಬದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಭಜನಾ ಪರಿಷತ್ ಮೂಲಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ತಾಲೂಕು ಭಜನಾ ಪರಿಷತ್ತುಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯುತ್ತಿವೆ. ಅವುಗಳಲ್ಲಿ ಕಡಬ ತಾಲೂಕು ಭಜನಾ ಪರಿಷತ್ ತನ್ನ ಸಂಘಟನೆ, ಕಾರ್ಯಚಟುವಟಿಕೆ ಹಾಗೂ ಸೇವಾ ಮನೋಭಾವದಿಂದ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಭಜನೆಗೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಸೇವಾ ಕಾರ್ಯಗಳಲ್ಲಿಯೂ ಭಜನಾ ಮಂಡಳಿಗಳು ತೊಡಗಿಕೊಂಡಾಗ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯಗಳು ಇನ್ನಷ್ಟು ಅರ್ಥಪೂರ್ಣವಾಗುತ್ತವೆ ಎಂದು ಹೇಳಿದರು.

ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪೂಜ್ಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಸ್ಥಾಪಿಸಿದರು. ದುಶ್ಚಟಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಜನಜಾಗೃತಿ ವೇದಿಕೆಯನ್ನು ರೂಪಿಸಿದರು. ಪ್ರಕೃತಿ ವಿಕೋಪದಂತಹ ತುರ್ತು ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ನೆರವಾಗುವ ನಿಟ್ಟಿನಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕವನ್ನು ಆರಂಭಿಸಿದರು. ಇಂದಿನ ಸಮಾಜದಲ್ಲಿ ಧಾರ್ಮಿಕತೆ ಮತ್ತು ಸಂಸ್ಕಾರಗಳು ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಭಜನಾ ಪರಿಷತ್ತನ್ನು ಆರಂಭಿಸಿರುವುದು ಶ್ಲಾಘನೀಯ. ಸಮಾಜಕ್ಕೆ ಅಗತ್ಯವಾದ ಹೊಸ ಹೊಸ ಚಿಂತನೆಗಳ ಮೂಲಕ ನಿಜವಾದ ಸಾಮಾಜಿಕ ಬದಲಾವಣೆಯ ಹರಿಕಾರರಾಗಿ ಪೂಜ್ಯರು ಕಾರ್ಯನಿರ್ವಹಿಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಅವಕಾಶ ದೊರೆತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಸಭೆಯಲ್ಲಿ ಭಜನಾ ಪರಿಷತ್ ಸಮನ್ವಯಾಧಿಕಾರಿ ಸಂತೋಷ್ ಅವರು ಸೆ.28ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಕುರಿತು ಮಾಹಿತಿ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಸಭೆಯಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಒಗ್ಗು, ಗೌರವ ಸಲಹೆಗಾರ ಸತ್ಯನಾರಾಯಣ ಹೆಗ್ಡೆ, ವಿವಿಧ ವಲಯಗಳ ಭಜನಾ ಪರಿಷತ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.

ಸವಣೂರು ವಲಯದ ಹರ್ಷಿಣಿ ಸ್ವಾಗತಿಸಿದರು. ಬಿಳಿನೆಲೆ ವಲಯದ ಮೇಲ್ವಿಚಾರಕ ರವಿಪ್ರಸಾದ್ ನಿರೂಪಿಸಿದರು. ಸವಣೂರು ವಲಯದ ದಿವೀಶ್ ನಾವೂರು ವಂದಿಸಿದರು.

CALL NOW 8606485844

 

Leave a Reply

error: Content is protected !!