ಶಿಶಿಲ: ಕಪಿಲಾ ನದಿಯ ಮಧ್ಯೆ ಸಿಲುಕಿದ್ದ ವೃದ್ಧನ ರಕ್ಷಣೆ; ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಮಯೋಚಿತ ಕಾರ್ಯಾಚರಣೆ

ಶೇರ್ ಮಾಡಿ

 

ಶಿಶಿಲ:  ಕಪಿಲಾ ನದಿಯ ಮಧ್ಯೆ ಸಿಲುಕಿದ್ದ ವೃದ್ಧನ ರಕ್ಷಣೆ; ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಮಯೋಚಿತ ಕಾರ್ಯಾಚರಣೆ

ಶಿಶಿಲ: ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಅಪಾಯಕಾರಿಯಾಗಿ ಉಕ್ಕಿ ಹರಿಯುತ್ತಿದ್ದ ಕಪಿಲಾ ನದಿಯ ಮಧ್ಯೆ ಸಿಲುಕಿದ್ದ ಸುಮಾರು 72 ವರ್ಷದ ಶಿಶಿಲ ಗ್ರಾಮದ ಕೊಳಂಬೆ ನಿವಾಸಿ ಬಾಲಪ್ಪ (72) ಅವರನ್ನು ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಮಯೋಚಿತ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಬುಧವಾರ ಶಿಶಿಲ ಸಮೀಪದ ಬದಿಗುಡ್ಡೆ ಪ್ರದೇಶದಲ್ಲಿ ನಡೆದಿದೆ.

ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬದಿಗುಡ್ಡೆ ಪ್ರದೇಶದ ಕಪಿಲಾ ನದಿ ತೀರಕ್ಕೆ ತೆರಳಿದ್ದ ಕೆಲ ಯುವಕರು ನದಿಯ ಮಧ್ಯಭಾಗದಲ್ಲಿ ವ್ಯಕ್ತಿಯೊಬ್ಬರು ಅಸಹಾಯಕರಾಗಿ ನಿಂತಿರುವುದನ್ನು ಗಮನಿಸಿದರು. ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದ ನದಿಯ ನೀರಿನ ಹರಿವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದ ಕಾರಣ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಅವರು ತಕ್ಷಣವೇ ಸ್ಥಳೀಯ ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದರು.

ಮಾಹಿತಿ ಪಡೆದ ತಕ್ಷಣ ಸ್ವಯಂಸೇವಕರಾದ ರಾಧಾಕೃಷ್ಣ ಗುತ್ತು ಹಾಗೂ ರಮೇಶ ಬೈರಕಟ್ಟ ಸ್ಥಳೀಯ ಪರಿಣತ ಈಜುಗಾರ ಮೋಹನ ಗೌಡ ಬದ್ರಿಜಾಲು ಅವರೊಂದಿಗೆ ಸ್ಥಳಕ್ಕೆ ಧಾವಿಸಿದರು. ಪರಿಶೀಲನೆ ನಡೆಸಿದಾಗ ಶಿಶಿಲೇಶ್ವರ ದೇವಸ್ಥಾನದ ಕಿಂಡಿ ಅಣೆಕಟ್ಟಿನಿಂದ ಸುಮಾರು 900 ಮೀಟರ್ ಕೆಳಭಾಗದಲ್ಲಿ, ರಭಸವಾಗಿ ಹರಿಯುತ್ತಿದ್ದ ಕಪಿಲಾ ನದಿಯ ಎರಡು ಕವಲುಗಳ ಮಧ್ಯೆ ಶಿಶಿಲ ಗ್ರಾಮದ ಕೊಳಂಬೆ ನಿವಾಸಿ ಬಾಲಪ್ಪ (72) ಆತಂಕದಿಂದ ನಿಂತಿರುವುದು ಕಂಡುಬಂದಿತು.

ತಂಡದ ಸದಸ್ಯರು ಮೊದಲು ಬಾಲಪ್ಪ ಅವರಿಗೆ ಧೈರ್ಯ ತುಂಬಿ, ಜೀವರಕ್ಷಕ ಜಾಕೆಟ್ ತೊಡಿಸಿ, ಜೀವರಕ್ಷಕ ಹಗ್ಗದ ಸಹಾಯದಿಂದ ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿದರು. ನೀರಿನ ತೀವ್ರ ಹರಿವಿನ ನಡುವೆಯೂ ಅಪಾರ ಸಾಹಸ ಪ್ರದರ್ಶಿಸಿದ ರಕ್ಷಣಾ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ನದಿದಡಕ್ಕೆ ಕರೆತಂದು ಜೀವಾಪಾಯದಿಂದ ಪಾರು ಮಾಡಿದರು.

ಈ ಯಶಸ್ವಿ ಕಾರ್ಯಾಚರಣೆಗೆ ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಪಡೆದಿರುವ ವಿಶೇಷ ತರಬೇತಿಯೂ ನೆರವಾಯಿತು. ಕ್ಷೇತ್ರದ ವತಿಯಿಂದ ಅಡ್ಯನಡ್ಕದ ವಾರಾಣಾಶಿ ಫಾರ್ಮ್ ಕೊಳದಲ್ಲಿ ಅಂತರರಾಷ್ಟ್ರೀಯ ಮುಳುಗು ತಜ್ಞ ನೆದರ್ಲೆಂಡ್ಸ್‌ನ ಜೆರೋಮ್ ಅವರಿಂದ ಈಜು ಹಾಗೂ ಆಳ ಮುಳುಗು ರಕ್ಷಣೆಯ ಕುರಿತು ನೀಡಲಾದ ತರಬೇತಿಯ ಅನುಭವವನ್ನು ತಂಡ ಈ ಸಂದರ್ಭದಲ್ಲಿ ಸಮರ್ಪಕವಾಗಿ ಬಳಸಿಕೊಂಡಿತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಉಮೇಶ್ ಕುಕ್ಕೆ, ರೂಪೇಶ್ ಬೈಪಾಡಿ, ದಿನೇಶ್ ಬದಿಗುಡ್ಡೆ ಸೇರಿದಂತೆ ಸ್ಥಳೀಯರು ಸಹಕರಿಸಿದರು. ಸಮಯೋಚಿತ ಮಾಹಿತಿ ನೀಡಿದ ಯುವಕರು ಹಾಗೂ ಕ್ಷಿಪ್ರವಾಗಿ ಸ್ಪಂದಿಸಿದ ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

 

Leave a Reply

error: Content is protected !!