ಬಂಟ್ವಾಳ ಲಾವಣ್ಯ ಕೊಲೆ ಪ್ರಕರಣ; ಹತ್ಯೆಗೆ ಬಳಸಿದ್ದ ತಲವಾರು ಉಪ್ಪಿನಂಗಡಿಯಿಂದ ಖರೀದಿಸಿದ್ದು..!!!

ಶೇರ್ ಮಾಡಿ

 

ಬಂಟ್ವಾಳ ಲಾವಣ್ಯ ಕೊಲೆ ಪ್ರಕರಣ; ಹತ್ಯೆಗೆ ಬಳಸಿದ್ದ ತಲವಾರು ಉಪ್ಪಿನಂಗಡಿಯಿಂದ ಖರೀದಿಸಿದ್ದು..!!!

ಉಪ್ಪಿನಂಗಡಿ: 14 ದಿನಗಳ ಹಿಂದೆ ಜುಲೈ 16ರಂದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಕೊಲೆಗೆ ಬಳಸಿದ್ದ ಮಾರಾಕಾಸ್ತ್ರವನ್ನು ಉಪ್ಪಿನಂಗಡಿಯಲ್ಲಿ ಖರೀದಿಸಿದ್ದ ಎಂಬ ಕಾರಣಕ್ಕೆ ಬಂಟ್ವಾಳ ಪೊಲೀಸರು ಬುಧವಾರ ಉಪ್ಪಿನಂಗಡಿಯಲ್ಲಿ ಮಹಜರು ಪ್ರಕ್ರಿಯೆಯನ್ನು ನಡೆಸಿದರು.

ಲಭ್ಯ ಮಾಹಿತಿಯ ಪ್ರಕಾರ ಆರೋಪಿ ತನ್ನ ಏಕಮುಖ ಪ್ರೀತಿಯನ್ನು ಮಾನ್ಯ ಮಾಡದ ಲಾವಣ್ಯಳನ್ನು ಕೊಲೆಗೈಯುವ ಬಗ್ಗೆ ಪೂರ್ವ ಯೋಜನೆಯನ್ನು ರೂಪಿಸಿದ್ದ ಎನ್ನಲಾಗಿದ್ದು, ಪೂರಕವಾಗಿ ಜುಲೈ 15ರಂದೇ ಉಪ್ಪಿನಂಗಡಿಗೆ ಆಗಮಿಸಿ ಅಲ್ಲಿ ಕೃಷಿ ಸಲಕರಣೆಗಳ ಮಾರಾಟ ಮಳಿಗೆಗೆ ಭೇಟಿ ನೀಡಿದ್ದ. ಅಲ್ಲಿ ಕೃಷಿಕರು ಬಳಸಲು ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆಯನ್ನು ಕೇಳಿದ್ದ. ಬಳಿಕ ಅಲ್ಲಿದ ಹೊರ ಹೋಗಿ ಬೇರೆಲ್ಲೋ ವಿಚಾರಿಸಲು ಯತ್ನಿಸಿ ಮರಳಿ ಅದೇ ಮಳಿಗೆಗೆ ಬಂದು ಕತ್ತಿಯನ್ನು ಖರೀದಿಸಿದ್ದ. ಕಾಗದದಿಂದ ಸುತ್ತುವರೆದು ಪ್ಯಾಕ್ ಮಾಡಲಾದ ಕತ್ತಿಯನ್ನು ಅಲ್ಲೇ ಸ್ವಲ್ಪ ಹೊತ್ತು ಇರಿಸಿ ಹೋದಾತ ಬಳಿಕ ಬಂದು ಕತ್ತಿಯನ್ನು ಪಡೆದುಕೊಂಡು ಹೋಗಿರುವ ದೃಶ್ಯಾವಳಿಗಳು ಮಳಿಗೆಯ ಸಿಸಿ ಕ್ಯಾಮಾರದಲ್ಲಿ ಸಂಗ್ರಹವಾಗಿರುವುದು ಗೋಚರಿಸಿದೆ.

ಈ ಬಗ್ಗೆ ತನಿಖಾಧಿಕಾರಿಗಳು ಆರೋಪಿ ಚೇತನ್‍ನ ಮುಖವನ್ನು ಕರಿ ಬಟ್ಟೆಯಿಂದ ಮರೆಮಾಚಿ ಸ್ಥಳಕ್ಕೆ ಕರೆ ತಂದಿದ್ದು, ಮಹಜರು ಪ್ರಕ್ರಿಯೆಯನ್ನು ನಡೆಸಿದರು. ತನಿಖಾ ಹಾಗೂ ಮಹಜರು ಪ್ರಕ್ರಿಯೆಗೆ ಕೃಷಿ ಸಲಕರಣೆಗಳ ಮಾರಾಟ ಮಳಿಗೆಯ ಸಿಬ್ಬಂದಿಗಳು ಸಹಕರಿಸಿದರು.

 

Leave a Reply

error: Content is protected !!