ನೆಲ್ಯಾಡಿ: ಯು-ಟರ್ನ್, ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

ಶೇರ್ ಮಾಡಿ

 

ನೆಲ್ಯಾಡಿ: ಯು-ಟರ್ನ್, ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ–75ರಲ್ಲಿ ನೆಲ್ಯಾಡಿ ಭಾಗದಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ತೀರಾ ಅವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಗಾಂಧಿ ಮೈದಾನದಿಂದ ಬೆಥನಿ ವಿದ್ಯಾ ಸಂಸ್ಥೆಗಳ ಮಧ್ಯೆ ತಕ್ಷಣ ಯು-ಟರ್ನ್ ಹಾಗೂ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು ಎಂದು ನೆಲ್ಯಾಡಿ ಸಮಾನ ಮನಸ್ಕ ವೇದಿಕೆ ಆಗ್ರಹಿಸಿದೆ.

ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ ಡಾ.ವರ್ಗೀಸ್ ಕೈಪನಡ್ಕ ನೆಲ್ಯಾಡಿ ಗಾಂಧಿ ಮೈದಾನದ ಸುತ್ತಮುತ್ತ ಸಂತ ಜಾರ್ಜ್ ಪದವಿಪೂರ್ವ ಕಾಲೇಜು, ಬೆಥನಿ ವಿದ್ಯಾ ಸಂಸ್ಥೆ, ಸರ್ಕಾರಿ ವಿಶ್ವವಿದ್ಯಾಲಯ ಘಟಕ ಕಾಲೇಜು, ನರ್ಸಿಂಗ್ ಕಾಲೇಜು ಹಾಗೂ ಶ್ರೀರಾಮ ವಿದ್ಯಾ ಕೇಂದ್ರ ಸೇರಿದಂತೆ ಐದು ಶಿಕ್ಷಣ ಸಂಸ್ಥೆಗಳಲ್ಲಿ ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಬಸ್‌ಗಳು ಅತ್ಯಂತ ಕಿರಿದಾದ ಸರ್ವೀಸ್ ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಇದೇ ವ್ಯಾಪ್ತಿಯಲ್ಲಿ ನಾಲ್ಕು ಚರ್ಚ್‌ಗಳು, ಒಂದು ಮಸೀದಿ ಇರುವುದಲ್ಲದೆ, ಆಲಂಕಾರು ಕಡೆಯಿಂದ ಬರುವ ಮಡಿಕೇರಿ–ಧರ್ಮಸ್ಥಳ ರಾಜ್ಯ ಹೆದ್ದಾರಿ ಹಾಗೂ ಎರಡು ಜಿಲ್ಲಾ ಪಂಚಾಯಿತಿ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುತ್ತವೆ. ಇಷ್ಟೊಂದು ಸಂಚಾರ ದಟ್ಟಣೆ ಹಾಗೂ ಸ್ಥಳೀಯ ಅಗತ್ಯಗಳನ್ನು ಪರಿಗಣಿಸದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿರುವುದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಯು-ಟರ್ನ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಾಹನ ಸವಾರರು ತಮ್ಮ ಗಮ್ಯಸ್ಥಾನ ತಲುಪಲು ಸುಮಾರು ಮೂರು ಕಿಲೋಮೀಟರ್‌ಗೂ ಅಧಿಕ ದೂರ ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಮಯ ವ್ಯರ್ಥವಾಗುವುದರ ಜೊತೆಗೆ ಇಂಧನ ವೆಚ್ಚ ಹೆಚ್ಚಾಗಿ ಅನಗತ್ಯ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಅವರು ತಿಳಿಸಿದರು.

ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಇಕ್ಬಾಲ್ ಮಾತನಾಡಿ, ಕಾಮಗಾರಿ ಆರಂಭವಾದ 2021ರಿಂದಲೇ ಸ್ಥಳೀಯ ಆಡಳಿತ, ವಿದ್ಯಾಸಂಸ್ಥೆಗಳು ಹಾಗೂ ಸಾರ್ವಜನಿಕರ ಪರವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು, ಸಂಸದರು ಮತ್ತು ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆರಂಭದಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರೂ, ಇದೀಗ ವೈಜ್ಞಾನಿಕ ಕಾರಣಗಳನ್ನು ಮುಂದಿಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯು-ಟರ್ನ್ ಇಲ್ಲದಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ವಿದ್ಯಾಸಂಸ್ಥೆಗಳಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇರಿದಂತೆ ಅಗತ್ಯ ಸೇವೆಗಳ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಗಾಂಧಿ ಮೈದಾನ–ಬೆಥನಿ ವಿದ್ಯಾ ಸಂಸ್ಥೆಗಳ ಮಧ್ಯೆ ಯು-ಟರ್ನ್ ಹಾಗೂ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಹತ್ತು ದಿನಗಳೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸ್ಥಳೀಯ ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾ ಸಂಸ್ಥೆಯ ಸಂಚಾಲಕ ಫಾ. ನೋಮೀಸ್ ಕುರಿಯಕೋಸ್, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಗೌರವಾಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಲಾಂ ಬಿಲಾಲ್, ಮಾಜಿ ಸದಸ್ಯ ಆನಂದ ಪಿಲವೂರು, ಆಟೋ ಚಾಲಕರ ಸಂಘದ ರವಿಪ್ರಸಾದ್ ಗುತ್ತಿಮನೆ, ಅಬೂಬಕ್ಕರ್ ಸಿದ್ದಿಕ್, ಗಣೇಶ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Leave a Reply

error: Content is protected !!