










ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಜಾಗ್ರತಾ ಕ್ರಮವಾಗಿ ಮಹತ್ವದ ಆದೇಶ ಹೊರಡಿಸಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಆದೇಶದಂತೆ ಆಗಸ್ಟ್ 1, 2026 (ಶನಿವಾರ) ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು (ವಸತಿ ಶಾಲೆಗಳು ಸೇರಿ), ದ್ವಿತೀಯ ಪಿಯುಸಿ (12ನೇ ತರಗತಿ)ವರೆಗಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳು, ಐಟಿಐ ಹಾಗೂ ಡಿಪ್ಲೊಮಾ ಕಾಲೇಜುಗಳಿಗೆ (ವಸತಿ ಕಾಲೇಜುಗಳು ಸೇರಿ) ರಜೆ ಘೋಷಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ–2005ರ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಮುಂದುವರಿಯುವ ಸಾಧ್ಯತೆ ಇರುವುದರಿಂದ ಮಕ್ಕಳು ನದಿ, ಹೊಳೆ, ಕೆರೆ, ತಗ್ಗು ಪ್ರದೇಶ ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಪಾಲಕರು ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಸಹ ನದಿ ಮತ್ತು ಸಮುದ್ರ ತೀರಗಳಿಗೆ ಹೋಗುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.



