ಕೊಕ್ಕಡದಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ, ಬಡ ರೈತನ ಕೃಷಿ ನಾಶಕ್ಕೆ ರೈತ ಸಂಘ ಖಂಡನೆ ಹಾಗೂ ಪ್ರತಿಭಟನೆಗೆ ಸಿದ್ದತೆ

ಶೇರ್ ಮಾಡಿ

ನೇಸರ ಎ.05: ಸರಕಾರಿ ಭೂಮಿಯಲ್ಲಿ ಮಾಡಿದ ಅನಧಿಕೃತ ಸಾಗುವಳಿಯನ್ನು ಕ್ರಮೀಕರಣ ಮಾಡಲು ಕರ್ನಾಟಕ ಸರಕಾರ ಭೂಕಂದಾಯ ಅಧಿನಿಯಮಕ್ಕೆ ತಿದ್ದುಪಡಿ ತಂದು ಕಾನೂನು ಮಾಡಿರುವಾಗ ಅದನ್ನು ಉಲ್ಲಂಘಿಸಿ ಸರಕಾರಿ ಭೂಮಿಯಲ್ಲಿದ್ದ ಫಾರೂಕ್ ಎಂಬವರ ಅಡಿಕೆ ಕೃಷಿ ಮೊದಲಾದ ಕೃತಾವಳಿಯನ್ನು ಅನಧಿಕೃತ ಅತಿಕ್ರಮಣ ನಡೆಸಿ ನಾಶ ಮಾಡಿ ನಷ್ಟ ಉಂಟು ಮಾಡಿದ ದೌರ್ಜನ್ಯ ಎಸಗಿದ ಅರಣ್ಯ ಇಲಾಖೆಯ ನಡೆ ಸರ್ವಾದಿಕಾರ, ಅದಿಕಾರ ದುರುಪಯೋಗ, ಕ್ರಿಮಿನಲ್‍ ಟ್ರಸ್‍ ಪಸ್, ವಂಚನೆ, ಗಡಿರೇಖೆ ಮುಚ್ಚಿರುವ, ಬೆದರಿಕೆ ಒಡ್ಡಿದ ಇತ್ಯಾದಿ ಪ್ರಕರಣಗಳ ಅಪರಾಧ ಎಸಗಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷರಾದ ಲಕ್ಷ್ಮಣಗೌಡ ಪಾಂಗಳ ಹಾಗೂ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್‍ ಘಟನೆಯನ್ನು ತೀವ್ರವಾಗಿ ಖಂಡಸಿದ್ದಾರೆ.

ಕೊಕ್ಕಡ ಗ್ರಾಮದ ಸ.ನಂ. 187/1 ಸುಮಾರು 711 ಎಕ್ರೆ ಜಮೀನಿದ್ದು ಅದರಲ್ಲಿ 38 ಎಕ್ರೆ ಅರಣ್ಯ ಇಲಾಖೆಗೆ ನೀಡಲಾಗಿದೆ. ಆದರೆ ಇನ್ನೂ ಅದನ್ನು ಫ್ಲೋಟಿಂಗ್ ಮಾಡಿ ಸರಕಾರ ನೀಡಿಲ್ಲ. ಅರಣ್ಯ ಇಲಾಖೆಗೆ ನೀಡಿದ ಜಮೀನನ್ನು ಕೆಸಿಡಿಸಿ ಗೆ ಗೇರುಕೃಷಿ ನಾಟಿ ಮಾಡಲು ನೀಡಿದ್ದು, ಗೇರು ಕೃಷಿಯ ಸುತ್ತಾ ಇಲಾಖೆ ಅಗಳು ಕೂಡಾ ಹಾಕಿದೆ. ಆದರೆ ಅಗಳಿನ ಹೊರಗಿರುವ ಸರಕಾರಿ ಭೂಮಿಯಲ್ಲಿ ಕಳೆದ 20 ವರ್ಷಗಳಿಂದ ಸ್ವಾದೀನ ಹೊಂದಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಾ ಸರಕಾರದ ಅಕ್ರಮ- ಸಕ್ರಮ ಕಂದಾಯ ಕಾಯ್ದೆಯ ನಿಯಮದಂತೆ 2018 ರಲ್ಲಿ ಪಾರಂ ನಂ.57 ರಲ್ಲಿ ಅರ್ಜಿ ಸಲ್ಲಿಸಿದ ಭೂಮಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕನಿಷ್ಟ ಒಂದು ನೋಟೀಸು ಆಗಲಿ, ಭೂಮಿಯ ಅಳತೆಯನ್ನಾಗಲಿ ನಡೆಸದೆ ಇನ್ಯಾವುದೋ ಜಮೀನಿಗೆ ಗೂಂಡಾಗಳಂತೆ ಬಂದು ಕೃಷಿ ನಾಶ ಮಾಡಿರುವುದು ಕಾನೂನು ಬಾಹಿರ ಕೃತ್ಯ ಎಂದವರು ಹೇಳಿದ್ದಾರೆ. ಈ ದೌರ್ಜನ್ಯ ವಿರುದ್ದ ಪೋಲೀಸ್‍ ದೂರು ನೀಡಿದರೆ ಪೋಲಿಸ್ ಇಲಾಖೆಯೂ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂದು ದೌರ್ಜನ್ಯ ನಡೆಸಿದವರ ಪರ ನಿಂತಿರುವುದು ಭಾರತದ ದೇಶದ ಅರಾಜಕತೆಗೆ, ಬಿಜೆಪಿ ಸರಕಾರದ ರೈತ ವಿರೋದಿ ನೀತಿಗೆ ಜೀವಂತ ಸಾಕ್ಷಿಯಾಗಿದೆ ಎಂದರು. ಕಳೆದ 6 ತಿಂಗಳು ಹಿಂದೆ ಒಮ್ಮೆ ಈ ರೀತಿ ಅರಣ್ಯ ಇಲಾಖೆ ಅತಿಕ್ರಮಣಕ್ಕೆ ಮುಂದಾಗಿರುವುವಾಗ ನ್ಯಾಯಾಲಯದ ಮೊರೆ ಹೋದ ಫಾರೂಕ್‍ ಅವರು ಅರಣ್ಯ ಇಲಾಖೆಗೆ ಒಂದು ತಿಂಗಳ ನೋಟೀಸು ನೀಡಿ ಕೇಸ್‍ ದಾಖಲಿಸ ಬೇಕಿತ್ತೆಂದು ನ್ಯಾಯಾಲಯ ದಾವೆ ಅಂಗೀಕರಿಸಲು ನಿರಾಕರಿಸಿತ್ತು. ನ್ಯಾಯಾಲಯದ ಈ ಸೂಚನೆ ಕಳೆದ ವಾರವಷ್ಟೇ ಹೊರ ಬಿದ್ದಿತ್ತು. ಅದಕ್ಕಾಗಿ ಈಗಾಗಲೇ ಅರಣ್ಯ ಇಲಾಖೆಗೆ ನೊಟೀಸು ಜಾರಿ ಮಾಡಲಾಗಿದೆ. ಒಂದು ತಿಂಗಳು ಕಳೆದರೆ ಕೇಸ್‍ ದಾಖಲಾಗುವುದೆಂದು ತಕ್ಷಣ ಇವರ ಭೂಮಿಯನ್ನು ನಾಶ ಮಾಡುವ ಏಕೈಕ ದುರುದ್ದೇಶದಿಂದ ಹಿಟಾಚಿ ತಂದು ಅಕ್ರಮ ಪ್ರವೇಶ ಮಾಡಿ ಕೃಷಿ ನಾಶ ಮಾಡಲಾಯಿತು. ಕೇಸು ತಾಂತ್ರಿಕ ಕಾರಣದಿಂದ ಅಂಗೀಕೃತ ಆಗದಿರುವುದನ್ನೇ ಕೋರ್ಟು ಅರಣ್ಯ ಇಲಾಖೆ ಪರ ಆದೇಶ ಮಾಡಿದೆ ಎಂದು ಸುಳ್ಳು ದಾಖಲೆ ಹೇಳಿರುವುದು ಒಂದು ಕ್ರಿಮಿನಲ್‍ ಅಪರಾಧವಾಗಿದೆ. ಕಿರಿಯ ನ್ಯಾಯಾಲಯ ತಾಂತ್ರಿಕ ಕಾರಣವನ್ನು ಮುಂದೊಡ್ಡಿ ದಾವೆ ಅಂಗೀಕಾರ ಮಾಡದ್ದರಿಂದ ಈ ದೊಡ್ಡ ಅನಾಹುತಕ್ಕೆ ಕಾರಣವಾಯಿತಾದರೂ, ಇದೀಗ ಕಿರಿಯ ನ್ಯಾಯಾಲಯದ ತೀರ್ಮಾನ ವಿರುದ್ದ ಹಿರಿಯ ನ್ಯಾಯಾಲಯಕ್ಕೆ ಆರ್.ಎ.ನಂ.7/2022 ರಂತೆ ಮೇಲ್ಮವಿಯನ್ನೂ ಸಲ್ಲಿಸಲಾಗಿದೆ. ನ್ಯಾಯಾಲಯದ ತೀರ್ಮಾನ ಇನ್ನಷ್ಟೇ ಬರಬೇಕಿದೆ. ಹೀಗಿದ್ದೂ ನ್ಯಾಯಾಲಯದ ತೀರ್ಮಾನಕ್ಕೂ ಕಾಯದೆ, ನ್ಯಾಯಾಲಯದ ಗಮನಕ್ಕೂ ತಾರದೆ ದೇಶದ ನ್ಯಾಯಾಂಗಕ್ಕೆ, ಕಾನೂನಿಗೆ, ಯಾವುದಕ್ಕೂ ಗೌರವ ನೀಡದೆ ಸರಕಾರಿ ಭೂಮಿ ಎಂಬ ಸತ್ಯಗೊತ್ತಿದ್ದೂ ಕೂಡಾ ಗೂಂಡಾಗಿರಿ ನಡೆಸಿದ ಅರಣ್ಯ ಇಲಾಖೆಯ ಫಾರೆಸ್ಟರ್ ಅರಣ್ಯ ರಕ್ಷಕರು, ವಾಚರಿಗಳು, ಕೆಸಿಡಿಸಿ ರೇಂಜರ್, ಅವರುಗಳನ್ನು ಅಮಾನತ್ತು ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ಹಿಟಾಚಿ ಮಾಲಕರ ಮೇಲೂ ಕ್ರಿಮಿನಲ್‍ ಕೇಸ್‍ ದಾಖಲಿಸಬೇಕು ಹಾಗೂ ಕೃಷಿಕನಿಗೆ ಆದ ನಷ್ಟವನ್ನು ಆ ಗೂಂಡಾಗಿರಿ ನಡೆಸಿದ ಸಿಬ್ಬಂದಿಗಳಿಂದ ವಸೂಲಿ ಮಾಡಿಕೊಡಲು ಸರಕಾರ ಮುಂದಾಗಬೇಕೆಂದು ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.

ನಿಜವಾಗಿ ಸಾವಿರಾರು ಎಕ್ರೆ ಅರಣ್ಯ ಭೂಮಿ ಲೂಟಿ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಈ ಅದಿಕಾರಿಗಳು ಬಡ ರೈತನ ಮೇಲೆ ದಾಳಿ ನಡೆಸಿ ತಮ್ಮ ಉತ್ತರನ ಪೌರುಷವನ್ನು ಸಾಬೀತು ಮಾಡಿದ್ದಾರೆ ಎಂದರು. ಮುಂದಿನ ಒಂದು ವಾರದ ಒಳಗೆ ಈ ಬಡ ರೈತನಿಗೆ ನ್ಯಾಯ ಒದಗದಿದ್ದಲ್ಲಿ ತಾಲೂಕಿನ ರೈತರು ಒಂದಾಗಿ ಬೃಹತ್ ಪ್ರತಿಭಟನೆ ನಡೆಸಿ ಇದರ ಹಿಂದಿರುವ ರಾಜಕೀಯ, ತಾರತಮ್ಯಗಳನ್ನು, ನಿಜವಾದ ಅರಣ್ಯ ಒತ್ತುವರಿದಾರರು ಯಾರೆಂಬುದರ ಬಗ್ಗೆ ಎಲ್ಲವನ್ನೂ ಬಹಿರಂಗ ಪಡಿಸಲಾಗುವುದು ಎಂದವರು ಎಚ್ಚರಿಕೆ ನೀಡಿದ್ದಾರೆ.

Leave a Reply

error: Content is protected !!