ನೇಸರ ಎ.29: ಮೇಯಲು ಬಿಟ್ಟಿದ್ದ ಕರುವೊಂದನ್ನು ಮನೆಗೆ ಕರೆದುಕೊಂಡು ಹೋಗುವಾಗ ಯುವಕರ ಗುಂಪೊಂದು ತನ್ನ ಕೆಲಸದಾಳು ಮೇಲೆ ಹಲ್ಲೆ ಮಾಡಿ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಈ ಪ್ರಕರಣದಲ್ಲಿ ಮಹಿಳೆಯು ಸುಳ್ಳು ದೂರು ನೀಡಿದ್ದು ಮಹಿಳೆಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಘಟನಾ ಸ್ಥಳದಲ್ಲಿ ಮಹಿಳೆ ಇರಲೇ ಇಲ್ಲ ಎಂದು ಯುವಕರ ಗುಂಪು ಸ್ಪಷ್ಟಪಡಿಸಿದ್ದಾರೆ.
ಏ.27ರ ಸಂಜೆ 8 ಗಂಟೆ ಸುಮಾರಿಗೆ ತಾನು ತಮ್ಮ ಅಂಗಡಿಯಿಂದ ಪೆರಿಯಶಾಂತಿಯ ಮೂಲಕ ಮಣ್ಣಗುಂಡಿ ಬಳಿ ಇರುವ ತಮ್ಮ ಮನೆಗೆ ಕರುವನ್ನು ಕರೆದುಕೊಂಡು ಹೋಗುತ್ತಿದ್ದಾಗ ಕೊಕ್ಕಡದ ಯುವಕರ ತಂಡವೊಂದು ನನ್ನನ್ನು ನಿಲ್ಲಿಸಿ ಕರುವಿನ ಬಗ್ಗೆ ಪ್ರಶ್ನಿಸಿದ್ದು, ಬಳಿಕ ತನ್ನ ಜೊತೆಗಿದ್ದ ತನ್ನ ಕೆಲಸದಾಳುವಿನ ಮೇಲೆ ಹಲ್ಲೆ ಮಾಡಿ, ತನಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆಯು ತನ್ನ ಪತಿಯ ಮೂಲಕ ದೂರು ನೀಡಿದ್ದಾರೆ.
ಏ.27 ರ ಸಂಜೆ 7.30ರ ಸುಮಾರಿಗೆ ಪುತ್ತೂರಿನಿಂದ ಕೊಕ್ಕಡಕ್ಕೆ ಪೆರಿಯಶಾಂತಿ ಮಾರ್ಗವಾಗಿ ಬರುತ್ತಿದ್ದ ನಮಗೆ ಪಾನಮತ್ತನಾಗಿ ಕರುವನ್ನು ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕಾಣಿಸಿದ್ದಾನೆ. ರಾತ್ರಿಯ ವೇಳೆ ಕರುವನ್ನು ಎಲ್ಲಿಗೆ ಕೊಂಡು ಹೋಗುತ್ತಿದ್ದೀರಿ ಎಂದು ವಿಚಾರಿಸಿದ್ದೇವೆ. ಆತ ಇದು ಸಾಕು ಕರು ಆಗಿದ್ದು, ಮನೆಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ಈ ಬಗ್ಗೆ ನೆಲ್ಯಾಡಿಯ ವ್ಯಕ್ತಿಯೋರ್ವರಲ್ಲಿ ವಿಚಾರಿಸಿದಾಗ ಇದು ಸಾಕು ಕರು ಎಂದು ದೃಢಪಟ್ಟಿದೆ. ಬಳಿಕ ಕರುವನ್ನು ಸುರಕ್ಷತೆಯಿಂದ ಕರೆದುಕೊಂಡು ಹೋಗಲು ಹೇಳಲಾಗಿದ್ದು ಅಲ್ಲಿಂದ ನಾವು ಕೊಕ್ಕಡಕ್ಕೆ ಬಂದು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ ಎಂದು ಯುವಕರ ತಂಡ ಸ್ಪಷ್ಟಪಡಿಸಿದೆ.
ಮಹಿಳೆ ನೀಡಿದ ದೂರಿನಂತೆ ನೆಲ್ಯಾಡಿ ಹೊರಠಾಣೆ ಪೊಲೀಸರಿಂದ ವಿಚಾರಣೆ
ಏಪ್ರಿಲ್ 27ರಂದು ನಡೆದ ಘಟನೆಯ ಬಗ್ಗೆ ಮಹಿಳೆಯ ಪತಿ ಮಹಿಳೆಯ ಪರವಾಗಿ ಅದೇ ದಿನ ರಾತ್ರಿ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಏಪ್ರಿಲ್ 28ರ ಬೆಳಿಗ್ಗೆ ಮಹಿಳೆಯನ್ನು ವಿಚಾರಿಸಿದಾಗ ಮಹಿಳೆಯು ತನ್ನ ಕೆಲಸದಾಳು ಮೇಲೆ ನಡೆದ ಹಲ್ಲೆ ಹಾಗೂ ಕೊಕ್ಕಡದ ಯುವಕರ ತಂಡ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ತಿಳಿಸಿದ್ದು ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದಾರೆ.
ಯುವಕರ ತಂಡವನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಯುವಕರನ್ನು ವಿಚಾರಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಯುವಕರ ತಂಡ ತಾವು ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ, ಘಟನಾ ಸ್ಥಳದಲ್ಲಿ ಯಾವ ಮಹಿಳೆಯನ್ನು ನಾವು ನೋಡಿಲ್ಲ. ಒಬ್ಬ ವ್ಯಕ್ತಿ ಹಾಗೂ ಸಣ್ಣ ಕರು ಮಾತ್ರ ಇದ್ದು, ಕರುವಿನ ಸುರಕ್ಷತೆಯ ವಿಷಯವಾಗಿ ಮಾಹಿತಿ ತಿಳಿದುಕೊಂಡಿದ್ದೇವೆ ಹೊರತು ಬೇರೆ ಯಾವ ಘಟನೆಯೂ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಮಹಿಳೆಯು ಪೆರಿಯಶಾಂತಿ ಬಳಿ ಇರುವ ತಮ್ಮ ಗೂಡಂಗಡಿಯಿಂದ ಘಟನಾಸ್ಥಳಕ್ಕೆ ತಮ್ಮ ರಿಕ್ಷಾದಲ್ಲೇ ಬಂದಿದ್ದಾಗಿ, ಘಟನಾ ಸ್ಥಳಕ್ಕೆ ಆಕೆ ಬಂದಾಗ ಅಲ್ಲಿ ಕರು ಮತ್ತು ಆ ವ್ಯಕ್ತಿಯ ಹೊರತು ಬೇರೆ ಯಾರೂ ಇರಲಿಲ್ಲ ಎಂದು ರಿಕ್ಷಾ ಚಾಲಕ ಸ್ಪಷ್ಟಪಡಿಸಿದ್ದಾರೆ. ಈತನ ಹೇಳಿಕೆಯನ್ನು ಕೂಡ ಪೊಲೀಸರು ದಾಖಲಿಸಿದ್ದಾರೆ.
ಎರಡು ತಂಡದ ಹೇಳಿಕೆಯನ್ನು ಆಲಿಸಿದ ನೆಲ್ಯಾಡಿ ಹೊರಠಾಣಾ ಪೊಲೀಸರು ಪ್ರಕರಣದ ಸತ್ಯಾಸತ್ಯತೆಯ ತನಿಖೆಯನ್ನು ನಡೆಸುತ್ತಿದ್ದಾರೆ.
💐 ಜಾಹೀರಾತು 💐