ನೇಸರ ಮೇ.26: ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಡಿಡುಪೆ-ಪೈಚಾರು ಹೆದ್ದಾರಿಯು ಸುಮಾರು 2 ವರ್ಷಗಳ ಹಿಂದೆ ಜಿಲ್ಲಾ ಪಂಚಾಯತ್ ರಸ್ತೆಯಾಗಿತ್ತು. ಈ ಸಂದರ್ಭ ಧರ್ಮಸ್ಥಳದಿಂದ ಪಟ್ರಮೆಗೆ ವರೆಗಿನ ರಸ್ತೆಗೆ ಡಾಮರೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೀಗ ಮಾಡಿದ ಕೆಲಸ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣದಿಂದ ಪದೇ ಪದೇ ಈ ಪ್ರದೇಶದಲ್ಲಿ ಅಪಘಾತಗಳು ಸಂಭವಿಸುತ್ತಲೇ ಇದೆ. ಪಟ್ರಮೆ-ಅನಾರು ಪ್ರದೇಶದ ಗ್ರಾಮಸ್ಥರು ಅಧಿಕಾರಿಗಳ, ಕಾಂಟ್ರಾಕ್ಟ್ ದಾರರ, ಇಲಾಖೆಗಳ ಅವೈಜ್ಞಾನಿಕ ರಸ್ತೆ ನಿರ್ಮಾಣ ಬೇಜವಾಬ್ದಾರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಅನಾರು ಸರಕಾರಿ ಶಾಲೆ – ದೇವಳದ ಸಮೀಪದ ರಸ್ತೆ:
2020ನೇ ಇಸವಿಯಲ್ಲಿ ಶಂಕು ಸ್ಥಾಪನೆಗೊಂಡ ಈ ರಸ್ತೆಯು ಪ್ರಸ್ತುತ ಡಾಮರೀಕರಣ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಧರ್ಮಸ್ಥಳ-ಪಟ್ರಮೆ ರಸ್ತೆಯ ನಡುವೆ ಇರುವ ಅನಾರು ದುರ್ಗಾಪರಮೇಶ್ವರಿ ದೇವಸ್ಥಾನದ ಸಮೀಪದ ರಸ್ತೆಯಿಂದ ನಿಡ್ಲೆ ಎಂಬ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆ ಇದೆ. ಜಿಲ್ಲಾ ಪಂಚಾಯತ್ ರಸ್ತೆಯಾಗಿರುವ ನಿಡ್ಲೆ-ಅನಾರು ರಸ್ತೆಯಲ್ಲಿ ಪ್ರಯಾಣಿಸುವಾಗ ಪಟ್ರಮೆ (ಪ್ರಸ್ತುತ ರಾಜ್ಯ ಹೆದ್ದಾರಿ) ರಸ್ತೆಯನ್ನು ಸಂಪರ್ಕಿಸುವ ಪ್ರದೇಶ ತೀರಾ ಇಳಿಜಾರು ಪ್ರದೇಶದಿಂದ ಕೂಡಿದೆ. ರಸ್ತೆಯ ಬದಿಯಲ್ಲಿ ನೀರು ಹೋಗಲು ಸರಿಯಾದ ಚರಂಡಿ ಅವಸ್ಥೆ ಇಲ್ಲದೆ, ನೀರೆಲ್ಲ ರಸ್ತೆಯಲ್ಲಿ ಬಂದು ಮರಳು, ಮಣ್ಣು ರಸ್ತೆಯಲ್ಲಿ ಶೇಖರಣೆಗೊಂಡಿದೆ ಹಾಗೂ ರಸ್ತೆಯು ತೀರಾ ಇಳಿಜಾರು ಆಗಿರುವುದರಿಂದ ಇಲ್ಲಿ ವಾಹನ ಚಾಲಕರಿಗೆ ಹಿಡಿತ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ. ಸರಿಯಾದ ವೈಜ್ಞಾನಿಕ ರೀತಿಯಲ್ಲಿ ರಸ್ತೆಯನ್ನು ನಿರ್ಮಾಣದ ಮಾಡದೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿದ್ದುದರ ಪರಿಣಾಮವೇ ಇದಕ್ಕೆಲ್ಲ ಕಾರಣವೆಂಬುದು ಇಲ್ಲಿನ ಜನರ ಆರೋಪ.
ಕಳೆದ 2 ತಿಂಗಳುಗಳಿಂದ 4 ಕ್ಕಿಂತ ಅಧಿಕ ವಾಹನ ಸವಾರರು ಈ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ರಸ್ತೆಯ ಮುಂದಿರುವ ಚರಂಡಿಯಲ್ಲಿ ಬಿದ್ದಿರುವ ಪ್ರಸಂಗಗಳು ನಡೆದಿವೆ. ಆದರೆ ಜಿಲ್ಲಾ ಪಂಚಾಯತ್ ಆಗಲಿ, ರಾಜ್ಯ ಹೆದ್ದಾರಿ ಇಲಾಖೆಯವರಾಗಲಿ ಈ ಬಗ್ಗೆ ಯಾವುದೇ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ರಸ್ತೆ ನಿರ್ಮಾಣ ಹಂತದಲ್ಲೇ ಅವೈಜ್ಞಾನಿಕ ರಸ್ತೆಯ ಬಗ್ಗೆ ಗ್ರಾಮಸ್ಥರ ಆಕ್ಷೇಪ:
ರಸ್ತೆ ನಿರ್ಮಾಣ ನಡೆಯುತ್ತಿರುವ ಹಂತದಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಆಗುತ್ತಿರುವುದರ ಬಗ್ಗೆ ಜನಪ್ರತಿನಿಧಿಗಳು, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ನಿಡ್ಲೆ- ಪಟ್ರಮೆ ರಸ್ತೆಯನ್ನು ಸಂಪರ್ಕಿಸುವ ರಸ್ತೆಯ ಮಧ್ಯದ ಜಾಗವನ್ನು ಎತ್ತರಗೊಳಿಸಿ ಕಾಮಗಾರಿಯನ್ನು ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಯಾವುದೇ ಗಮನ ನೀಡದೆ ಬೇಜವಾಬ್ದಾರಿಯಿಂದ ಮಾಡಿದ ಕೆಲಸದಿಂದಾಗಿ ಪ್ರಯಾಣಿಕರು ಸಂಕಟ ಪಡುವಂತಾಗಿದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯಾದ ಅಪಾಯಕಾರಿ ಸೂಚನಾ ಫಲಕಗಳಾಗಲಿ, ರಸ್ತೆಯ ಮಧ್ಯ ಭಾಗದಲ್ಲಿ ಹಂಪ್ ಗಳಾಗಲಿ, ಯಾವ ಕಡೆ ಚಲಿಸಿದರೆ ಯಾವ ಕಡೆ ತೆರಳಬಹುದು ಎಂಬುದರ ಬಗ್ಗೆಯಾಗಲಿ ಸೂಚನಫಲಕಗಳು ಅಳವಡಿಸದೇ ಇರುವುದು ಪ್ರಯಾಣಿಕರಿಗೆ ಒಟ್ಟಾರೆಯಾಗಿ ಈ ರಸ್ತೆಯು ಗೊಂದಲದ ಗೂಡಾಗಿ ನಿರ್ಮಾಣಗೊಂಡಿದೆ.
ಜನಪ್ರತಿನಿಧಿಗಳೇ, ಅಧಿಕಾರಿಗಳೇ, ಸಂಬಂಧಪಟ್ಟ ಇಲಾಖೆಗೆ ಚುರುಕು ಮುಟ್ಟಿಸಿ ಶೀಘ್ರವೇ ಸಮಸ್ಯೆ ಪರಿಹರಿಸಿ ಸಾರ್ವಜನಿಕರಿಗೆ ಭಯ ಮುಕ್ತ ಓಡಾಟಕ್ಕೆ ಅನುವು ಮಾಡಿಕೊಡಿ ಎಂಬುದೇ ಇಲ್ಲಿನ ಮತದಾರರ ಒಟ್ಟು ಆಶಯ.
ಜಾಹೀರಾತು