ನೇಸರ ಜೂ.02: ಉಪ್ಪಿನಂಗಡಿಯಲ್ಲಿ ಹಿಜಾಬ್ ಹಿನ್ನೆಯಲ್ಲಿ ನಡೆದ ವಿದ್ಯಮಾನಗಳ ವರದಿಗೆ ತೆರಳಿದ್ದ ಪತ್ರಕರ್ತರಿಗೆ ಹಲ್ಲೆ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿರುವ ಕಡಬ ತಾಲೂಕು ಪತ್ರಕರ್ತರ ಸಂಘ ಆರೋಪಿಗಳ ವಿರುದ್ಧ ಕಠಿಣ ಕಾನೂನು ಜರಗಿಸಬೇಕೆಂದು ಅಗ್ರಹಿಸಿ ಜಿಲ್ಲಾಧಿಕಾರಿಯವರಿಗೆ ಕಡಬ ತಹಶಿಲ್ದಾರ್ ಮುಖಾಂತರ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯವರಿಗೆ ಎ.ಎಸ್.ಪಿ ಗಾನಾ ಪಿ.ಕುಮಾರ್ ಮುಖಾಂತರ ಮನವಿ ಸಲ್ಲಿಸಿತು.
ಉಪ್ಪಿನಂಗಡಿಯಲ್ಲಿ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಗೆ ಬಂದ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆದ ವಿಚಾರವನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೆ ದಿಗ್ಭಂಧನ ವಿಧಿಸಿ. ಕ್ಯಾಮರಾವನ್ನು ಬಲವಂತವಾಗಿ ಕಸಿದು ಅದರಲ್ಲಿದ್ದ ವಿಡಿಯೊಗಳನ್ನು ಡಿಲೀಟ್ ಮಾಡಿದ್ದಲ್ಲದೆ ಹಲ್ಲೆ ನಡೆಸಿ ಕೆಲವು ಕಿಡಿಗೇಡಿಗಳು ಕ್ರೌರ್ಯ ಮೆರದಿದ್ದಾರೆ. ಇದು ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಿ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು. ಆ ಮೂಲಕ ಪತ್ರಕರ್ತರಿಗೆ ನ್ಯಾಯ ಒದಗಿಸಬೇಕು, ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಅಗ್ರಹಿಸಲಾಯಿತು.
ಕಡಬ ತಾಲೂಕು ಕಛೇರಿಯಲ್ಲಿ ತಹಸೀಲ್ದಾರ್ ಅನಂತ ಶಂಕರ್ ಮನವಿ ಸ್ವೀಕರಿಸಿ ತಕ್ಷಣ ಜಿಲ್ಲಾಧಿಕಾರಿಯವರಿಗೆ ಮನವಿ ಮೈಲ್ ಮಾಡಲಾಗುವುದು ಎಂದರು. ಕಡಬ ಠಾಣೆಯಲ್ಲಿ ಮನವಿ ನೀಡುವ ವೇಳೆ ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಉಪಸ್ಥಿತರಿದ್ದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊೈಲ, ಕಾರ್ಯದರ್ಶಿ ವಿಜಯಕುಮಾರ್ ಪೆರ್ಲ, ಸದಸ್ಯ ಪ್ರಕಾಶ್ ಕೋಡಿಂಬಾಳ, ವಿ4 ಚಾನಲ್ ವರದಿಗಾರ ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು